




ಡೈಲಿವಾರ್ತೆ:26/ಅ./2026

ಬೈತುರ್ಳಿ-ಬಿಕರ್ನಕಟ್ಟೆ ರಸ್ತೆ ಕಾಮಗಾರಿ ಸ್ಥಗಿತ: ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು SDPI ಆಗ್ರಹ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಬಿಕರ್ನಕಟ್ಟೆ–ಸಾಣೂರು ರಸ್ತೆ ಅಭಿವೃದ್ಧಿ ಕಾಮಗಾರಿ ಬೈತುರ್ಳಿ ವರೆಗೆ ಪ್ರಗತಿಯಲ್ಲಿದ್ದರೂ, ಬೈತುರ್ಳಿಯಿಂದ ಬಿಕರ್ನಕಟ್ಟೆ ನಡುವಿನ ಸುಮಾರು 3ರಿಂದ 4 ಕಿ.ಮೀ. ಉದ್ದದ ರಸ್ತೆಯ ಕಾಮಗಾರಿ ಇನ್ನೂ ಆರಂಭವಾಗದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹದಗೆಟ್ಟ ರಸ್ತೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಕಾಮಗಾರಿಯನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸುವಂತೆ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ ಅವರು ಮನವಿ ಸಲ್ಲಿಸಿ, ಬೈತುರ್ಳಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಪ್ರತಿನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಅಪಘಾತದ ಅಪಾಯ ಎದುರಿಸುತ್ತಿದ್ದಾರೆ. ವಾಹನಗಳ ಸಂಚಾರದಿಂದ ವ್ಯಾಪಕವಾಗಿ ಧೂಳು ಹರಡುತ್ತಿದ್ದು, ರಸ್ತೆ ಬದಿಯ ನಿವಾಸಿಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಮೂಡುಬಿದಿರೆ, ಗುರುಪುರ ಕೈಕಂಬ ಹಾಗೂ ವಾಮಂಜೂರು ಮಾರ್ಗವಾಗಿ ಮಂಗಳೂರು ನಗರವನ್ನು ಸಂಪರ್ಕಿಸುವ ಈ ರಸ್ತೆ ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಪ್ರಮುಖ ಸಂಚಾರ ಮಾರ್ಗವಾಗಿದೆ. ಇಂತಹ ಮಹತ್ವದ ರಸ್ತೆಯ ಒಂದು ಭಾಗದ ಕಾಮಗಾರಿ ಅಪೂರ್ಣವಾಗಿರುವುದರಿಂದ ಸಾರ್ವಜನಿಕರು ಪ್ರತಿದಿನ ಅನಗತ್ಯ ಸಂಕಷ್ಟ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿಯ ಸಂಪೂರ್ಣ ಪ್ರಯೋಜನ ಜನರಿಗೆ ದೊರೆಯಬೇಕಾದರೆ ಬೈತುರ್ಳಿ–ಬಿಕರ್ನಕಟ್ಟೆ ನಡುವಿನ ಬಾಕಿ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿ, ಕಾಮಗಾರಿಯನ್ನು ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು SDPI ಮನವಿಯಲ್ಲಿ ಒತ್ತಾಯಿಸಿದೆ. ಸಾರ್ವಜನಿಕರ ಸಂಚಾರ ಸುರಕ್ಷತೆ ಮತ್ತು ದೈನಂದಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸದಿದ್ದರೆ, ಸಾರ್ವಜನಿಕರನ್ನು ಸಂಘಟಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.