ಡೈಲಿವಾರ್ತೆ:28/ಅ./2026

ಪಂಚವರ್ಣ ರಾಜ್ಯೋತ್ಸವ ಆಶಯಗೀತೆ ಅನಾವರಣ

ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇದೇ ಬರುವ ನವೆಂಬರ್ 6ರಂದು ಕೋಟದಲ್ಲಿ ನಡೆಯಲಿರುವ ಪಂಚವರ್ಣ ರಾಜ್ಯೋತ್ಸವ ಸದ್ಭಾವನಾ ಕಾರ್ಯಕ್ರಮದ ಆಶಯಗೀತೆಯನ್ನು ಇತ್ತೀಚಿಗೆ ಕೋಟದ ಪಂಚವರ್ಣ ಕಚೇರಿಯಲ್ಲಿ ಅನಾವರಣಗೊಳಿಸಲಾಯಿತು.

ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ರಚನೆ ಸಂಯೋಜನೆಯ ಸದ್ಭಾವನಾ ಎಂಬ ಗೀತೆಯನ್ನು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಮಾಜಕ್ಕಾಗಿ ಸದಾ ತುಡಿತ ಹೊಂದಿದ ಪಂಚವರ್ಣದಂತಹ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದೆ ಇಂತಹ ಸಂಸ್ಥೆಯ ಆಶಯಗೀತೆ ರಚಿಸಿದ ಸಾಹಿತಿ ನರೇಂದ್ರ ಕುಮಾರ್ ಕೋಟ ಕಾರ್ಯ ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಾಹಿತಿ ನರೇಂದ್ರ ಕುಮಾರ್ ಕೋಟ ಸದ್ಭವಾನ ಗೀತೆಯ ಪರಿಕಲ್ಪನೆಯನ್ನು ಸಭೆಯಲ್ಲಿ ತೆರೆದಿಟ್ಟರು.
ಸಮಾಜಸೇವಕ ಅವಿನಾಶ್ ಕಾಮತ್‌,ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ರೋಟರಿ ಸಮುದಾಯದಳ ಕೋಟೇಶ್ವರ ಅಧ್ಯಕ್ಷೆ ಸುಪ್ರಿತಾ ಪುರಾಣಿಕ್ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ವಂದಿಸಿದರು.