


ಡೈಲಿವಾರ್ತೆ:28/ಅ./2026




ಉಡುಪಿ: ಲಂಡನ್ನಲ್ಲಿ ಉದ್ಯೋಗದ ಆಮಿಷವೊಡ್ಡಿ ರೂ.16.16 ಲಕ್ಷ ವಂಚನೆ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಯು.ಕೆ.ಯ ಲಂಡನ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ಹಾಗೂ ಅವರ ಪತ್ನಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಉದ್ಯೋಗವನ್ನೂ ನೀಡದೆ, ಸಂಪೂರ್ಣ ಹಣವನ್ನೂ ಹಿಂತಿರುಗಿಸದೆ ವಂಚಿಸಿರುವ ಆರೋಪದಡಿ ಮೂವರು ಮಹಿಳೆಯರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರ ತಾಲೂಕಿನ ಕೋಡಾಣಿ ನಿವಾಸಿ ಸುನೀಲ್ (46) ಅವರು ನೀಡಿದ ದೂರಿನ ಪ್ರಕಾರ, ಉಡುಪಿಯ ಕೆಳಾರ್ಕಳಬೆಟ್ಟುವಿನ ಸುಬ್ರಹ್ಮಣ್ಯ ನಗರದ ನಿವಾಸಿ ಸವಿತಾ ರೋಡ್ರಿಗಸ್ (41), ಬೆಂಗಳೂರಿನ ಅನೇಕಲ್ ನಿವಾಸಿಗಳಾದ ಪ್ರಕೃತಿ (34) ಹಾಗೂ ಸುನಿತಾ ಎಂಬವರು ಪಿರ್ಯಾದಿದಾರ ಸುನೀಲ್ ಮತ್ತು ಅವರ ಪತ್ನಿ ಕೋಸಾಂವ್ ಸುನಿಲ್ ಲೋಬೊ ಅವರಿಗೆ ಲಂಡನ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಈ ಭರವಸೆಯನ್ನು ನಂಬಿದ ದಂಪತಿಯಿಂದ ಆರೋಪಿತರು ಒಟ್ಟು ರೂ.17,45,000 ಹಣವನ್ನು ಪಡೆದುಕೊಂಡಿದ್ದರು. ಆದರೆ, ಹಣ ಪಡೆದ ಬಳಿಕ ದಂಪತಿಗೆ ಯಾವುದೇ ಉದ್ಯೋಗ ಕಲ್ಪಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪಡೆದ ಹಣದಲ್ಲಿ ರೂ.2,79,000 ಅನ್ನು ಮಾತ್ರ ವಾಪಸ್ ನೀಡಿದ್ದು, ಉಳಿದ ರೂ.14,66,000 ಹಣವನ್ನು ಹಿಂದಿರುಗಿಸಿಲ್ಲ ಎನ್ನಲಾಗಿದೆ. ಅಲ್ಲದೆ, ಪಿರ್ಯಾದಿದಾರರಿಂದ ಹೆಚ್ಚುವರಿಯಾಗಿ ರೂ.15,000 ಖರ್ಚು ಮಾಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಒಟ್ಟು ರೂ.16,16,000 ಹಣವನ್ನು ಮರಳಿಸದೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 146/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 3(5), 316(2) ಮತ್ತು 318(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

