


ಡೈಲಿವಾರ್ತೆ: 01/ನ./2026




ವಕ್ವಾಡಿ ಗುರುಕುಲದಲ್ಲಿ ‘ಕಾರ್ನಿವಲ್-2.0’ ಮಕ್ಕಳ ಹಬ್ಬ ಸಂಭ್ರಮದಿಂದ ಆಚರಣೆ: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರುರಿಂದ ಉದ್ಘಾಟನೆ

ಕುಂದಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನವೆಂಬರ್ 1ರಂದು ‘ಗುರುಕುಲ ಕಾರ್ನಿವಲ್-2.0 – ಮಕ್ಕಳ ಹಬ್ಬ 2026’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಿಹಿಯನ್ನು ಅರಸುವ ಇರುವೆಯಂತೆ ಮೌಲ್ಯಯುತ ಶಿಕ್ಷಣದತ್ತ ಗಮನಹರಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ತಾವು ಪಡೆದ ಶಿಕ್ಷಣವನ್ನು ಜೀವನದಲ್ಲಿ ಸಾರ್ಥಕಗೊಳಿಸಿಕೊಳ್ಳುವ ಜತೆಗೆ, ಇತರರಿಗೆ ಕೆಡುಕನ್ನು ಬಯಸದೆ ಸನ್ಮಾರ್ಗದಲ್ಲಿ ನಡೆದು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ರವಿ ಬಸ್ರೂರು ಅವರು ತಮ್ಮ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ವೇದಿಕೆಯಲ್ಲಿ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಅವರ ಸಂಗೀತಮಯ ಪ್ರಸ್ತುತಿ ಮಕ್ಕಳ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಆತ್ಮವಿಶ್ವಾಸ ತುಂಬಿ, ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಆಶಯದೊಂದಿಗೆ ಸಂಸ್ಥೆ ಕಳೆದ 20 ವರ್ಷಗಳಿಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಕಾರ್ನಿವಲ್ ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಸಹಭಾಗಿತ್ವದಲ್ಲಿ ರೂಪುಗೊಂಡ ಮಕ್ಕಳ ಹಬ್ಬವಾಗಿದೆ. ರಚನಾತ್ಮಕ ಚಿಂತನೆ ಹಾಗೂ ಸೃಜನಶೀಲ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬಲಪಡಿಸುವುದರೊಂದಿಗೆ ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರ ಶೆಟ್ಟಿ ಅವರು ಗೌರವ ಉಪಸ್ಥಿತರಿದ್ದು, ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.








ಮಕ್ಕಳ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ 50ಕ್ಕೂ ಅಧಿಕ ವಿವಿಧ ವ್ಯಾಪಾರ ಮಳಿಗೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ಆಹಾರ ಮಳಿಗೆಗಳು, ಖಾದಿ ಉತ್ಪನ್ನಗಳ ಮಳಿಗೆಗಳು, ಸೌಂದರ್ಯ ಸಾಧನಗಳು ಮತ್ತು ಆಯುರ್ವೇದ ಸಿದ್ಧ ಔಷಧಗಳ ಮಳಿಗೆಗಳು ಗಮನ ಸೆಳೆದವು. ಇದರೊಂದಿಗೆ ಬೌನ್ಸಿಂಗ್ ಕ್ಯಾಸಲ್, ಜಂಪಿಂಗ್ ಜಾಕ್, ಗಾಳಿಪಟ ಸ್ಪರ್ಧೆ, ವಿವಿಧ ನೃತ್ಯ ಸ್ಪರ್ಧೆಗಳು ಹಾಗೂ ಪುಟಾಣಿಗಳಿಗಾಗಿ ಆಯೋಜಿಸಿದ್ದ ರಾಜ–ರಾಣಿ ಸ್ಪರ್ಧೆಗಳು ಮಕ್ಕಳ ಆಕರ್ಷಣೆಯ ಕೇಂದ್ರಗಳಾದವು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ವಿವಿಧ ಚಟುವಟಿಕೆಗಳಲ್ಲಿ ಸಾರ್ವಜನಿಕರು, ಪೋಷಕರು ಹಾಗೂ ಸ್ಥಳೀಯ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡರು. ವಿವಿಧ ವಯೋಮಾನದ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ಉತ್ಸಾಹಕ್ಕೆ ವೇದಿಕೆ ಕಲ್ಪಿಸಿದ ಕಾರ್ನಿವಲ್, ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಸಮನ್ವಯಕ್ಕೆ ಸಾಕ್ಷಿಯಾಯಿತು.


ಸಂಜೆ 4 ಗಂಟೆಗೆ ಕಾರ್ಯಕ್ರಮದ ಸಮಾರೋಪ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಐಶ್ವರ್ಯ ನಿರೂಪಿಸಿದರು. ಪ್ರಾಂಶುಪಾಲೆ ಡಾ. ರೂಪ ಶೆಣೈ ಸ್ವಾಗತಿಸಿದರು. ಅನುರಾಧಾ ಮಯ್ಯ ಪ್ರಾರ್ಥಿಸಿದರು. ಸುಷ್ಮಾ ಅತಿಥಿಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮಿ ವಂದಿಸಿದರು.

