


ಡೈಲಿವಾರ್ತೆ: 03/ನ./2026




ನ. 4ರಂದು (ನಾಳೆ) ಹಾವಂಜೆ ಅಲ್ ಫಲಾಹ್ ಜುಮಾ ಮಸೀದಿ ಉದ್ಘಾಟನೆ: ಮಸೀದಿ ಸಂದರ್ಶನ, ಸೌಹಾರ್ದ ಸಂಗಮ; ಹರೇಕಳ ಹಾಜಬ್ಬ, ರವಿ ಕಟಪಾಡಿ ಸಹಿತ ಗಣ್ಯರಿಗೆ ನಾಗರಿಕ ಸನ್ಮಾನ

ಉಡುಪಿ, ನ.3: ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಲ್ ಫಲಾಹ್ ಜುಮಾ ಮಸೀದಿಯ ಉದ್ಘಾಟನೆ, ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ನ.4ರಂದು ನಡೆಯಲಿದೆ. ಧಾರ್ಮಿಕ ಸೌಹಾರ್ದ, ಪರಸ್ಪರ ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಗ್ಗೆ 9 ಗಂಟೆಗೆ ನಡೆಯುವ ಮಸೀದಿ ಉದ್ಘಾಟನಾ ಸಮಾರಂಭವನ್ನು ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೆರವೇರಿಸಲಿರುವರು.
ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅಲ್ ಮದನಿ ಅಲ್ ಪುರ್ಖಾನಿ ಭಾಷಣ ಮಾಡಲಿರುವರು. ಬಳಿಕ ಬೆಳಗ್ಗೆ 10:30ರಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಮಸೀದಿಯನ್ನು ಸಂದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಜೆ 5:45ಕ್ಕೆ ನಡೆಯುವ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲ ದಾಸ ಸ್ವಾಮೀಜಿ, ಉಡುಪಿ ಮದರ್ ಆಫ್ ಸಾರೋಸ್ ಚರ್ಚಿನ ಧರ್ಮಗುರು ರೆ. ಫಾ. ಡೆನ್ನಿಸ್ ಡೇಸಾ ಹಾಗೂ ಶಿವಮೊಗ್ಗ ಸಾದಾ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಸೌಹಾರ್ದ ಸಂದೇಶ ನೀಡಲಿರುವರು.

ಮಸೀದಿ ಅಧ್ಯಕ್ಷ ಜಿ.ಎ. ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಸಮಾಜಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರವಿ ಕಟಪಾಡಿ ಹಾಗೂ ಪ್ರಾಂಕಿ ಡಿಸೋಜ ಅವರನ್ನು ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಅಡ್ವಕೇಟ್ ಮುಹಮ್ಮದ್ ತಾಹೀರ್, ಮುಹಮ್ಮದ್ ಸಾಹೇಬ್, ಖಾಲಿದ್ ಅಬ್ದುಲ್ ಅಝೀಝ್, ಮುಹಮ್ಮದ್ ಅಲಿ ಗೋಳಿಕಟ್ಟೆ, ಅಬ್ದುಲ್ ರವೂಫ್ ಉಳ್ಳಾಲ, ಇಸ್ಮಾಯೀಲ್ ಭಟ್ಕಳ ಮತ್ತು ಮುಹಮ್ಮದ್ ಜುನೈದ್ ಅಸಾದಿ ದೊಡ್ಡಣಗುಡ್ಡೆ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇಪ್ತಿಕಾರ್ ಅಲಿ, ಹೈದರ್ ಪರ್ತಿಪ್ಪಾಡಿ, ಎಂ.ಎ. ಗಫೂರ್, ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಮಹೇಶ್ ಶೆಟ್ಟಿ, ಕುಕ್ಕಿಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಹಮ್ಮದ್ ಮೌಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

