


ಡೈಲಿವಾರ್ತೆ: 03/ನ./2026




ಸಾಲಿಗ್ರಾಮ ದೇಗುಲಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ: ರಾಷ್ಟ್ರೀಯ ಹೆದ್ದಾರಿ ಅಂಡರ್ಪಾಸ್ ನಿರ್ಮಾಣದ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚೆ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯವಾಹಕ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿ, ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಅಂಡರ್ಪಾಸ್ ನಿರ್ಮಿಸುವ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.

ದೇವಸ್ಥಾನದ ಸಮೀಪ ಅಂಡರ್ಪಾಸ್ ನಿರ್ಮಾಣದ ಅಗತ್ಯತೆ ಕುರಿತು ಚರ್ಚೆ ನಡೆದಿದ್ದು, ಈ ವಿಚಾರವನ್ನು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತ ಮಂಡಳಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಬಂಟ್ವಾಳ ನರಿಕೊಂಬು ಪ್ರಕಾಶ್ ಕಾರಂತ್ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನದ ಅರ್ಚಕ ವೇ.ಮೂ. ಜನಾರ್ದನ ಅಡಿಗ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಮಾಜಿ ಅಧ್ಯಕ್ಷ ಐರೋಡಿ ಜಗದೀಶ್ ಕಾರಂತ್, ಕೋಶಾಧಿಕಾರಿ ಎಂ. ಲಕ್ಷ್ಮೀನಾರಾಯಣ ಹೊಳ್ಳ, ಆಡಳಿತ ಮಂಡಳಿ ಸದಸ್ಯರಾದ ಕೆ. ತಾರಾನಾಥ ಹೊಳ್ಳ ಹಾಗೂ ಪ್ರಸನ್ನ ತುಂಗ, ಪೂರ್ವ ಉಪಾಧ್ಯಕ್ಷ ಬಿ. ರಘುನಾಥ ಸೋಮಯಾಜಿ ಉಪಸ್ಥಿತರಿದ್ದರು.
ಕೂಟಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ್ ಹಂದೆ, ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ಕಾರ್ಯದರ್ಶಿ ಮಹಾಬಲ ಹೇರಳೆ, ಆಡಳಿತ ಮಂಡಳಿಯ ಪೂರ್ವ ಸದಸ್ಯ ಕೃಷ್ಣ ಹೆಬ್ಬಾರ್ ಸೇರಿದಂತೆ ಸ್ಥಳೀಯರು ಹಾಗೂ ಇತರರು ಉಪಸ್ಥಿತರಿದ್ದರು.

