ಡೈಲಿವಾರ್ತೆ: 05/ನ./2026

ಬಾಳೆಕುದ್ರು ಮಠದ ಪುರಾತನ ವಿಗ್ರಹಗಳ ಮಾರಾಟಕ್ಕೆ ಯತ್ನ ಆರೋಪ: ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲು: ಮಠಕ್ಕೆ ಬೀಗ ಹಾಕಿ ಶ್ರೀಗಳು ಪರಾರಿ, ಪೂಜೆ ಸ್ಥಗಿತ – ಮೂವರು ಅಪರಿಚಿತರನ್ನು ವಶಕ್ಕೆ ಪಡೆದ ಕೋಟ ಪೊಲೀಸರು

ಬಾಳೆಕುದ್ರು: ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠ ಇದೀಗ ಗಂಭೀರ ವಿವಾದಕ್ಕೆ ಸಿಲುಕಿದೆ. ಮಠಕ್ಕೆ ಸೇರಿದ ಸುಮಾರು 1,000 ವರ್ಷಗಳಷ್ಟು ಪುರಾತನ ಆರು ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಮಠದ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಮಠದ ಹಿತರಕ್ಷಣಾ ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಮತ್ತೊಂದೆಡೆ, ಮಠಕ್ಕೆ ಬೀಗ ಹಾಕಲಾಗಿದ್ದು, ನಿತ್ಯ ಪೂಜೆ ಸ್ಥಗಿತಗೊಂಡಿದೆ. ಮಠದ ಹೊರಗಿನ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಮೂವರು ಅಪರಿಚಿತರನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಠದ ಹಿತರಕ್ಷಣಾ ಸಮಿತಿ ಸದಸ್ಯ ಸುರೇಶ್ ಅಡಿಗ ಹಾಗೂ ಶಿಷ್ಯ ಪ್ರೀತಮ್ ಅಡಿಗ, ಮಠದ ಆಡಳಿತ, ಪುರಾತನ ವಿಗ್ರಹಗಳ ಸುರಕ್ಷತೆ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು.

ಜಗದೀಶ್ ಐತಾಳ್ ನೀಡಿದ ದೂರಿನ ಮೇರೆಗೆ ನ.2ರಂದು ಎಫ್‌ಐಆರ್ ದಾಖಲಾಗಿದ್ದು, ಮಠದ ಸ್ವಾಮೀಜಿ, ಆಡಳಿತಾಧಿಕಾರಿ ಅನಿಲ್ ಕುಮಾರ್, ಜಯಲಕ್ಷ್ಮಿ, ಸಿಬ್ಬಂದಿ ಶ್ರೇಯಸ್ ಹಾಗೂ ಬೆಂಗಳೂರಿನ ಆಂಟಿಕ್ ವಸ್ತುಗಳ ವ್ಯಾಪಾರಿ ನಾಗೇಂದ್ರ ಪ್ರಸಾದ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ತಿಳಿಸಿದರು.

ಆರು ಪುರಾತನ ವಿಗ್ರಹಗಳ ಮಾರಾಟಕ್ಕೆ ಯತ್ನದ ಆರೋಪ:
ಮಠಕ್ಕೆ ಸೇರಿದವೆಂದು ಹೇಳಲಾಗುತ್ತಿರುವ ಸುಮಾರು 1,000 ವರ್ಷಗಳಷ್ಟು ಹಳೆಯ ಆರು ವಿಗ್ರಹಗಳ ಚಿತ್ರಗಳು ಬೆಂಗಳೂರಿನ ಆಂಟಿಕ್ ವ್ಯಾಪಾರ ಸಂಸ್ಥೆಯೊಂದರ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಪ್ರಕಟವಾಗಿವೆ ಎಂದು ಪ್ರೀತಮ್ ಅಡಿಗ ಆರೋಪಿಸಿದರು. ಇತಿಹಾಸಕಾರ ಗುರುರಾಜ ಭಟ್ ಅವರು ಹಿಂದಿನ ಸ್ವಾಮೀಜಿ ಶಂಕರಾಶ್ರಮ ಸ್ವಾಮೀಜಿಯವರ ಸಂದರ್ಶನದ ಮೂಲಕ ಪ್ರಕಟಿಸಿರುವ ಐತಿಹಾಸಿಕ ದಾಖಲೆಗಳಲ್ಲಿನ ವಿಗ್ರಹಗಳ ಚಿತ್ರಗಳು ಹಾಗೂ ವೆಬ್‌ಸೈಟ್‌ನಲ್ಲಿರುವ ಚಿತ್ರಗಳನ್ನು ಹೋಲಿಸಿದಾಗ ಅವು ಮಠಕ್ಕೆ ಸೇರಿದ ವಿಗ್ರಹಗಳೇ ಎಂಬ ಅನುಮಾನ ಬಲವಾಗಿದೆ ಎಂದರು.

ವಿಗ್ರಹಗಳ ಪ್ರಸ್ತುತ ಸ್ಥಿತಿ, ಮಠದಲ್ಲಿರುವ ಮೂಲ ವಿಗ್ರಹಗಳ ಸಂಖ್ಯೆ ಹಾಗೂ ಅವುಗಳ ಮಾರಾಟದ ಹಿಂದಿನ ಉದ್ದೇಶದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಂತರರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲದೊಂದಿಗೆ ಪ್ರಕರಣಕ್ಕೆ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ನಾಗೇಂದ್ರ ಪ್ರಸಾದ್ ಅವರನ್ನು ಬೆಂಗಳೂರಿನ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದರು.

ಎರಡು ವರ್ಷಗಳಿಂದ ವಿವಾದ: ಆಡಿಯೋ ಪ್ರಕರಣದ ಪ್ರಸ್ತಾಪ
ಕಳೆದ ಎರಡು ವರ್ಷಗಳಿಂದ ಸನ್ಯಾಸಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮಠದಲ್ಲಿ ನೆಲೆಸಿದ್ದು, ಅವರನ್ನು ಸ್ಥಳೀಯ ಭಕ್ತರು ಸ್ವಾಮೀಜಿಯಾಗಿ ಒಪ್ಪಿಕೊಂಡಿಲ್ಲ ಎಂದು ಪ್ರೀತಮ್ ಅಡಿಗ ಆರೋಪಿಸಿದರು. ಇತ್ತೀಚೆಗೆ ಸ್ವಾಮೀಜಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ಆಡಿಯೋ ಸಂಭಾಷಣೆಗಳು ವೈರಲ್ ಆಗಿದ್ದು, ಅವು ಎಐ ಮೂಲಕ ಸೃಷ್ಟಿಸಿದ ನಕಲಿ ಆಡಿಯೋಗಳೆಂದು ಸ್ವಾಮೀಜಿ ಕಡೆಯವರು ಹೇಳಿಕೊಂಡಿದ್ದರು. ಆದರೆ, ಫೊರೆನ್ಸಿಕ್ ಸಾಫ್ಟ್‌ವೇರ್ ಮೂಲಕ ಪರಿಶೀಲಿಸಿದಾಗ ಅವು ಎಐ ಸೃಷ್ಟಿಯಲ್ಲ ಎಂಬುದು ತಿಳಿದುಬಂದಿದೆ ಎಂದು ಅವರು ಪ್ರತಿಪಾದಿಸಿದರು.

ಮಠಕ್ಕೆ ಬೀಗ: ನರಸಿಂಹ ದೇವರ ಪೂಜೆ ಸ್ಥಗಿತ
ಎಫ್‌ಐಆರ್ ದಾಖಲಾದ ಬಳಿಕ ಸ್ವಾಮೀಜಿ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಮಠವನ್ನು ತೊರೆದಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಇದರಿಂದ ನರಸಿಂಹ ದೇವರಿಗೆ ಪ್ರತಿದಿನ ಮೂರು ಹೊತ್ತು ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ ಎಂದು ಸುರೇಶ್ ಅಡಿಗ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ ಬೇರೆ ಮಠದಿಂದ ಬಂದವರು ಎಂದು ಹೇಳಲಾಗುತ್ತಿರುವ ಕೆಲವರು ಪೂಜೆ ಸಲ್ಲಿಸಿದ್ದರೂ, ಮಠದ ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ ನಡೆದಿಲ್ಲ. ಸ್ಥಳೀಯ ಭಕ್ತರಿಗೆ ಮಠ ಪ್ರವೇಶಿಸಲು ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ಕೊಠಡಿಯಲ್ಲಿ ಅವಿತುಕೊಂಡಿದ್ದ ಮೂವರು ಅಪರಿಚಿತರು ವಶಕ್ಕೆ

ಇದೇ ವೇಳೆ ಮಠದ ಹೊರಗಿನ ಕೊಠಡಿಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಅವಿತುಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಚಾರಿಸಿದಾಗ ತಾವು ಕೊಪ್ಪದಿಂದ ಮಠ ಕಾಯಲು ಬಂದಿದ್ದು, ಸ್ವಾಮೀಜಿಯವರೇ ಕಳುಹಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅನುಮಾನಗೊಂಡ ಸ್ಥಳೀಯರು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರನ್ನು ಮಠಕ್ಕೆ ಕಳುಹಿಸಿದವರು ಯಾರು ಹಾಗೂ ಅವರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಮಠದ ಆಸ್ತಿಪಾಸ್ತಿ, ಪುರಾತನ ವಿಗ್ರಹಗಳು ಹಾಗೂ ಧಾರ್ಮಿಕ ಪರಂಪರೆಯ ರಕ್ಷಣೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಗ್ರಹಗಳ ಮಾರಾಟದ ಆರೋಪ ಸೇರಿದಂತೆ ಎಲ್ಲ ಬೆಳವಣಿಗೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು. ಮಠದ ನಿತ್ಯ ಪೂಜೆ ಪುನರಾರಂಭಿಸಿ ಭಕ್ತರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುರೇಶ್ ಅಡಿಗ ಹಾಗೂ ಪ್ರೀತಮ್ ಅಡಿಗ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಉಡುಪ, ಸಚ್ಚಿದಾನಂದ ಅಡಿಗ, ಶಿವರಾಮ ಅಡಿಗ, ಶಿವರಾಮ ಉಡುಪ, ಪಟ್ಟಾಭಿರಾಮ ಸೋಮಯಾಜಿ, ಶ್ರೀಧರ ಭಟ್, ರಾಧಾಕೃಷ್ಣ ನಾಯಕ್, ನಾಗರಾಜ್ ಮಯ್ಯ, ಸುಬ್ರಹ್ಮಣ್ಯ ಆಚಾರ್ಯ, ರಾಜೇಶ್ ಮಧ್ಯಸ್ಥ ಹಾಗೂ ಅನಸೂಯಾ ದೇವಾಡಿಗ ಉಪಸ್ಥಿತರಿದ್ದರು.