


ಡೈಲಿವಾರ್ತೆ: 05/ನ./2026




ಕುಂದಾಪುರ – ಹೊಸಂಗಡಿ ರಸ್ತೆ ಅಗಲೀಕರಣಕ್ಕೆ ಆಗ್ರಹ: ಅಜಾಗರೂಕ ಟಿಪ್ಪರ್ ಸಂಚಾರ ನಿಯಂತ್ರಣಕ್ಕೆ ಒತ್ತಾಯಿಸಿ ನಾಳೆ ಕಂಡ್ಲೂರಿನಲ್ಲಿ ಬೃಹತ್ ಪ್ರತಿಭಟನೆ

ಕಂಡ್ಲೂರು: ಕುಂದಾಪುರದಿಂದ ಹೊಸಂಗಡಿಯವರೆಗಿನ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಹಾಗೂ ಈ ರಸ್ತೆಯಲ್ಲಿ ಟಿಪ್ಪರ್ ಸೇರಿದಂತೆ ಘನ ವಾಹನಗಳ ಅತಿವೇಗದ ಮತ್ತು ಅಜಾಗರೂಕ ಸಂಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ನ.6ರಂದು ಕಂಡ್ಲೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಭಾಗದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿರುವ ಸ್ಥಳೀಯರು, ಶಾಲಾ ಮಕ್ಕಳು, ಪಾದಚಾರಿಗಳು ಹಾಗೂ ಸಾರ್ವಜನಿಕರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕುಂದಾಪುರ – ಹೊಸಂಗಡಿ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ವಿಳಂಬವಿಲ್ಲದೆ ಆರಂಭಿಸುವುದರ ಜೊತೆಗೆ, ಟಿಪ್ಪರ್ ಮತ್ತು ಇತರ ಘನ ವಾಹನಗಳ ಸಂಚಾರದ ವೇಗದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಲಿದ್ದಾರೆ.
ವಿಶೇಷವಾಗಿ ಶಾಲೆಗಳ ಆರಂಭ ಮತ್ತು ಮುಕ್ತಾಯದ ವೇಳೆಯಲ್ಲಿ ಟಿಪ್ಪರ್ ವಾಹನಗಳ ಸಂಚಾರಕ್ಕೆ ಸಮಯದ ನಿರ್ಬಂಧ ವಿಧಿಸಬೇಕು. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿ, ರಸ್ತೆ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ಆಡಳಿತ ಸಮಿತಿ, ಸಮಾನ ಮನಸ್ಕರು, ಸಾರ್ವಜನಿಕರು ಹಾಗೂ ಪ್ರಗತಿಪರ ಹೋರಾಟಗಾರರ ನೇತೃತ್ವದಲ್ಲಿ ನ.6ರಂದು ಸಂಜೆ 4 ಗಂಟೆಗೆ ಕಂಡ್ಲೂರು ಪಂಚಾಯತ್ ವಠಾರದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

