


ಡೈಲಿವಾರ್ತೆ: 04/ನ./2026




ಕಾಪು: 70 ಪವನ್ ಚಿನ್ನಕ್ಕೆ ಕನ್ನ, ₹30 ಲಕ್ಷ ಹಣಕ್ಕೆ ಬೇಡಿಕೆ – ಪತಿ ಹಾಗೂ ಕುಟುಂಬಸ್ಥರಿಂದ ಕಿರುಕುಳ ಆರೋಪ: ಪ್ರಕರಣ ದಾಖಲು

ಕಾಪು: ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ನೀಡಿದ್ದ ಚಿನ್ನಾಭರಣವನ್ನು ಪತಿ ಬ್ಯಾಂಕ್ ಲಾಕರ್ನಿಂದ ತೆಗೆದುಕೊಂಡಿರುವುದು, ಹೆಚ್ಚುವರಿ ಹಣಕ್ಕಾಗಿ ಒತ್ತಡ ಹೇರುತ್ತಿರುವುದು ಸೇರಿದಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪದಡಿ ಪತಿ ಸೇರಿದಂತೆ ಆತನ ಕುಟುಂಬದ ಸದಸ್ಯರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ತಾಲೂಕು ನಿವಾಸಿ ರೂಹಿ ಪರ್ವಿನ್ (28) ಎಂಬವರು ನೀಡಿದ ದೂರಿನ ಪ್ರಕಾರ, ಕಾಪು ತಾಲೂಕಿನ ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ಉದ್ಯಾವರ ನಿವಾಸಿ ಮುಕ್ತಾರ್ ಅಲಿ ಅವರ ಪುತ್ರ ಬಿಲಾಲ್ ಸೈಯದ್ ಮೊಹಮ್ಮದ್ ಅವರೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿತ್ತು. ಮದುವೆಯ ಸಂದರ್ಭದಲ್ಲಿ ತವರು ಮನೆಯವರು 52 ಪವನ್ ಚಿನ್ನಾಭರಣ ನೀಡಿದ್ದು, ಮದುವೆ ಕಾರ್ಯಕ್ರಮಕ್ಕೆ ಸುಮಾರು ₹10 ಲಕ್ಷ ವೆಚ್ಚ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿವಾಹದ ಬಳಿಕ ಉದ್ಯಾವರದಲ್ಲಿರುವ ಪತಿಯ ಮನೆಗೆ ತೆರಳಿದ ಸಂದರ್ಭದಲ್ಲಿ ಅತ್ತೆ ಜೀನತ್ ಎಂ. ಅಲಿ, ಮೈದುನ ಫಾಹದ್ ಅಲಿ, ನಾದಿನಿ ನಾದೀಯ ಎಂ. ಅಲಿ ಹಾಗೂ ಆಕೆಯ ಪತಿ ಶೋಹೆಬ್ ಅವರಿಂದ ಕಿರುಕುಳ ಆರಂಭವಾಗಿತ್ತು ಎಂದು ಆರೋಪಿಸಲಾಗಿದೆ. ಪತಿ ತಡರಾತ್ರಿ ಮನೆಗೆ ಬರುವುದು, ಕೆಲವೊಮ್ಮೆ ಎರಡು-ಮೂರು ದಿನಗಳಾದರೂ ಮನೆಗೆ ಬಾರದೆ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಅತ್ತೆ ಸಮರ್ಥನೆ ಮಾಡಿಕೊಂಡು ಗದರಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತಿ ಅಬುಧಾಬಿಯಲ್ಲಿ ನೆಲೆಸಿದ್ದ ಸಂದರ್ಭದಲ್ಲಿಯೂ ಪತ್ನಿಯೊಂದಿಗೆ ಸಮಯ ಕಳೆಯದೆ ನಿರ್ಲಕ್ಷ್ಯ ವಹಿಸುತ್ತಿದ್ದರು. 2024ರ ಡಿಸೆಂಬರ್ 10ರಂದು ಪತಿ ಊರಿಗೆ ಮರಳಿದ ಬಳಿಕವೂ ಇದೇ ವರ್ತನೆ ಮುಂದುವರಿದಿತ್ತು. ಈ ಬಗ್ಗೆ ಪತಿ ಹಾಗೂ ಕುಟುಂಬದ ಸದಸ್ಯರನ್ನು ಪ್ರಶ್ನಿಸಿದಾಗ ಎಲ್ಲರ ಸಮ್ಮುಖದಲ್ಲಿ ಪತಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸುವ ರೀತಿಯಲ್ಲಿ ಹಿಂಸೆ ನೀಡಿದ್ದರು ಎಂದು ರೂಹಿ ಆರೋಪಿಸಿದ್ದಾರೆ.
ಪತಿ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ತಾನು ಕೆಲಸಕ್ಕೆ ಸೇರಿಕೊಂಡಿದ್ದು, ತನ್ನ ಸಂಪೂರ್ಣ ವೇತನವನ್ನು ಪತಿಗೆ ನೀಡುವಂತೆ ಒತ್ತಾಯಿಸಲಾಗುತ್ತಿತ್ತು. ಹಣ ನೀಡದಿದ್ದಾಗ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಇದರಿಂದಾಗಿ ಉದ್ಯೋಗವನ್ನೂ ತೊರೆಯಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಮದುವೆಯ ಆರಂಭದಿಂದಲೇ ತನ್ನ ಚಿನ್ನಾಭರಣಗಳನ್ನು ಅತ್ತೆಯ ವಶಕ್ಕೆ ನೀಡುವಂತೆ ಒತ್ತಾಯಿಸಲಾಗುತ್ತಿತ್ತು. ತನ್ನ ಒಟ್ಟು 70 ಪವನ್ ಚಿನ್ನಾಭರಣವನ್ನು ಪತಿ-ಪತ್ನಿಯ ಜಂಟಿ ಬ್ಯಾಂಕ್ ಖಾತೆಯ ಲಾಕರ್ನಲ್ಲಿ ಇರಿಸಲಾಗಿತ್ತು. ಕುಟುಂಬದ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಚಿನ್ನಾಭರಣ ಕೇಳಿದರೂ ಪತಿ ನೀಡಿರಲಿಲ್ಲ. ಬಳಿಕ ತಾನು ತಂದೆ, ತಾಯಿ ಹಾಗೂ ಸಹೋದರನೊಂದಿಗೆ ಖತಾರ್ನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ, ಕಳೆದ ನಾಲ್ಕು ತಿಂಗಳ ಹಿಂದೆ ಪತಿ ತನ್ನನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ನಂತರ ಭಾರತಕ್ಕೆ ಬಂದಿದ್ದ ಪತಿ, ತನಗೆ ಯಾವುದೇ ಮಾಹಿತಿ ನೀಡದೆ 2026ರ ಜೂನ್ 9ರಂದು ಬ್ಯಾಂಕ್ ಲಾಕರ್ನಲ್ಲಿದ್ದ ಸಂಪೂರ್ಣ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ತನ್ನ ಸಹೋದರಿಯ ಮದುವೆಗಾಗಿ ಚಿನ್ನಾಭರಣ ಕೇಳಿದಾಗ ಮದುವೆಗೆ ಚಿನ್ನ ಹಾಕುವ ಅಗತ್ಯವಿಲ್ಲ ಎಂದು ಪತಿ ಗದರಿಸಿದ್ದರು. ಮತ್ತೊಂದು ಸಂದರ್ಭದಲ್ಲಿ ಪತಿಯ ಸಹೋದರನ ಮದುವೆಗೆಂದು ಊರಿಗೆ ಬಂದಿದ್ದಾಗ ಬಿಸಿಯಾದ ಇಸ್ತ್ರಿ ಪೆಟ್ಟಿಗೆಯನ್ನು ತನ್ನ ಬೆನ್ನಿಗೆ ಇಟ್ಟು ಗಾಯಗೊಳಿಸಲಾಗಿತ್ತು. ಈ ಬಗ್ಗೆ ಅತ್ತೆಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಎರಡೂ ಕುಟುಂಬದವರು ಸಮಸ್ಯೆಯನ್ನು ಬಗೆಹರಿಸಲು ಮುಂದಾದ ಸಂದರ್ಭದಲ್ಲಿ ಖುಲಾನಾಮ ನೀಡುವಂತೆ ಒತ್ತಡ ಹೇರಲಾಗಿತ್ತು. ಪತಿ ಹಾಗೂ ಆತನ ಸಹೋದರ ಫಹಾದ್, ರೂಹಿ ಅವರ ಸಹೋದರನಿಗೆ ದೂರವಾಣಿ ಕರೆ ಮಾಡಿ ಖುಲಾನಾಮಕ್ಕೆ ಸಹಿ ಹಾಕುವಂತೆ ತಿಳಿಸಿದ್ದರು. ಸಹಿ ಹಾಕದಿದ್ದರೆ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬಿಲಾಲ್ಗೆ ಮತ್ತೊಂದು ಮದುವೆ ಮಾಡಿಸುವುದಾಗಿ ಹೇಳಿದ್ದರು ಎಂದು ಆರೋಪಿಸಲಾಗಿದೆ.
ಇದೇ ವೇಳೆ ಪತಿಯ ತಂದೆಯ ಸಹೋದರನ ಪುತ್ರಿ ಶಮಾ ಅಂಜುಮ್ ಎಂಬವರು ಪತ್ನಿಗೆ ಚಿನ್ನಾಭರಣ ನೀಡದಂತೆ ಪತಿಗೆ ಸೂಚಿಸಿದ್ದಲ್ಲದೆ, ಪತಿಯೊಂದಿಗೆ ಸಂಸಾರ ಮುಂದುವರಿಸಬೇಕಾದರೆ ₹30 ಲಕ್ಷ ಹಣ ತಂದುಕೊಡಬೇಕು. ಇಲ್ಲದಿದ್ದರೆ ಆತನಿಗೆ ಬೇರೆ ಮದುವೆ ಮಾಡಿಸಲಾಗುವುದು ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ದೂರಿನಲ್ಲಿದೆ.
ಇಷ್ಟೆಲ್ಲಾ ಘಟನೆಗಳ ನಡುವೆಯೂ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ಮುಂದುವರಿಸಲು ತಾನು ಸಿದ್ಧಳಿದ್ದರೂ, ಕುಟುಂಬದ ಸದಸ್ಯರು ಎಲ್ಲರ ಎದುರು ಅವಮಾನಿಸುತ್ತಿದ್ದರು. ಪ್ರಸ್ತುತ ತನ್ನ ವೈಯಕ್ತಿಕ ಹಾಗೂ ಶೈಕ್ಷಣಿಕ ದಾಖಲೆಗಳು ಅಬುಧಾಬಿಯಲ್ಲಿದ್ದು, ಅವುಗಳನ್ನು ಹಿಂತಿರುಗಿಸದೆ ಸತಾಯಿಸಲಾಗುತ್ತಿದೆ. ಪತಿಯು ತನ್ನೊಂದಿಗೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಂಡಿಲ್ಲ ಎಂದು ರೂಹಿ ಪರ್ವಿನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 145/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

