ಡೈಲಿವಾರ್ತೆ: 05/ನ./2026

ಧರ್ಮಕ್ಕಿಂತ ಮಾನವೀಯತೆ ದೊಡ್ಡದು: ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದೇ ನಿಜವಾದ ಸೇವೆ – ಈಶ ವಿಠಲದಾಸ ಸ್ವಾಮೀಜಿ: ಹಾವಂಜೆ: ನೂತನ ಅಲ್ ಫಲಾಹ್ ಜುಮ್ಮಾ ಮಸೀದಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮದಲ್ಲಿ ಸರ್ವಧರ್ಮ ಮುಖಂಡರ ಸಂದೇಶ

ಹಾವಂಜೆ, ನ.5: ಕೇವಲ ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳನ್ನು ನಿರ್ಮಿಸುವುದರಿಂದ ಸಮಾಜದ ಉದ್ದಾರ ಸಾಧ್ಯವಿಲ್ಲ. ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಮೂಲಕ ಮಾನವೀಯ ಸೇವೆ ಸಲ್ಲಿಸಿದಾಗ ಮಾತ್ರ ದೇವರ ಮೆಚ್ಚುಗೆಗೆ ಪಾತ್ರರಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ ಫಲಾಹ್ ಜುಮ್ಮಾ ಮಸೀದಿಯ ಉದ್ಘಾಟನೆ, ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಶಿಸ್ತು ಮತ್ತು ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ಹಣವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಬೇಕು. ಸರ್ವಧರ್ಮಗಳ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸೌಹಾರ್ದತೆಯ ಸಂದೇಶ ಸಾರಿದ ಗೋಳಿಕಟ್ಟೆಯ ಯುವಕರ ಕಾರ್ಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾತಿಗಿಂತ ನೀತಿ ಮುಖ್ಯ: ಫಾದರ್ ಡೆನಿಸ್ ಅಲೆಕ್ಸಾಂಡರ್ ಡೇಸಾ

ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ವಿ.ರೆ. ಫಾದರ್ ಡೆನಿಸ್ ಅಲೆಕ್ಸಾಂಡರ್ ಡೇಸಾ ಮಾತನಾಡಿ, ಧರ್ಮದ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿ ಮತ್ತು ವಿಶ್ವಾಸದ ಸೇತುವೆಗಳನ್ನು ನಿರ್ಮಿಸಬೇಕಿದೆ. ಮನುಷ್ಯ ಹುಟ್ಟುವಾಗ ಯಾವುದೇ ಜಾತಿ ಅಥವಾ ಧರ್ಮದ ಗುರುತಿನೊಂದಿಗೆ ಹುಟ್ಟುವುದಿಲ್ಲ. ಆದ್ದರಿಂದ ಜಾತಿಗಿಂತ ನೀತಿಗೆ ಆದ್ಯತೆ ನೀಡಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅವರ ದುಆದೊಂದಿಗೆ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಜಿ.ಎ. ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು.

ಶಿವಮೊಗ್ಗದ ಸಾದಾ ಇಸ್ಲಾಮಿಕ್ ಕಾಲೇಜಿನ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಪೊಲೀಸ್ ಠಾಣೆ ಅಥವಾ ನ್ಯಾಯಾಲಯಗಳ ಮೂಲಕ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಸಾಧ್ಯವಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳ ಮೂಲಕವೇ ಶಾಶ್ವತ ಸೌಹಾರ್ದತೆ ಸ್ಥಾಪಿಸಲು ಸಾಧ್ಯ ಎಂದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಿಂದಲೇ ಸೌಹಾರ್ದತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಕಲಿಸಬೇಕು. ಸಮಾಜದಲ್ಲಿ ದ್ವೇಷದ ಬದಲು ಪ್ರೀತಿ, ಸಹನೆ ಹಾಗೂ ಪರಸ್ಪರ ಗೌರವಕ್ಕೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮಂಗಳೂರಿನ ಮುಸ್ಲಿಂ ಮುಖಂಡ ಹೈದರ್ ಪರ್ತಿಪಾಡಿ ಮಾತನಾಡಿ, ಧರ್ಮಗಳ ಹೆಸರಿನಲ್ಲಿ ಮನುಷ್ಯರ ನಡುವೆ ಅಂತರ ಸೃಷ್ಟಿಯಾಗಬಾರದು. ಪ್ರತಿಯೊಬ್ಬರೂ ನೆಮ್ಮದಿ ಮತ್ತು ಗೌರವದಿಂದ ಬದುಕುವ ವಾತಾವರಣ ನಿರ್ಮಾಣವಾಗುವುದು ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಕ್ಕಿಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಜನಾಬ್ ಮಹಮ್ಮದ್ ಮೌಲ, ಗೋಳಿಕಟ್ಟೆ ಶ್ರೀ ವೀರ ಕಲ್ಕಡ ದೈವಸ್ಥಾನದ ಅಧ್ಯಕ್ಷ ನಾಗರಾಜ ಹೆಗ್ಡೆ, ದೈವ ನರ್ತಕ ಶ್ಯಾಮರಾಯ ಪಾಣ, ಅಬೂಬಕರ್ ಆತ್ರಾಡಿ, ಎನ್.ಎನ್.ಓ. ಅಧ್ಯಕ್ಷ ಜನಾಬ್ ಯಾಹ್ಯ ನಕ್ವಾ, ಆತ್ರಾಡಿ ಎಂ.ಜೆ.ಎಂ. ಖತೀಬರಾದ ಬಹು. ಇಸ್ಮಾಯಿಲ್ ಸಖಾಫಿ, ಕುಂಜಾಲ್ ಹಿದಾಯತುಲ್ ಇಸ್ಲಾಂ ಮದರಸಿನ ಹೈದರಾಲಿ ಮರ್ಝಖಿ ಅಲ್ ರಯ್ಜಿ, ಸಾಯಿರಾಧ ಗ್ರೂಪ್‌ನ ಮನೋಹರ ಶೆಟ್ಟಿ, ಕೀರ್ತಿ ಬಿಲ್ಡರ್ಸ್ ಮಾಲಕ ಸುಧೀರ್ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಸಂತೋಷನಗರ ಬದ್ರಿಯಾ ಜಾಮಿಯ ಮಸೀದಿಯ ಹನೀಫ್ ಹಾಜಿ, ಮೈಸೂರಿನ ಉದ್ಯಮಿ ಇಸ್ಮಾಯಿಲ್ ಭಟ್ಕಳ್, ಎಸ್‌ಎಂಎ ಉಡುಪಿ ರೀಜನ್ ಅಧ್ಯಕ್ಷ ಹಬೀಬ್ ಅಲಿ, ಆತ್ರಾಡಿ ಮೊಹಿದ್ಧೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಅಬ್ದುಲ್ಲಾ, ಕುಂಜಾಲ್ ನೂರ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಮೊಹಮ್ಮದ್ ಶಬ್ಬೀರ್, ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ (ರಿ.) ಅಧ್ಯಕ್ಷ ಮೊಹಮ್ಮದ್ ಅಲಿ, ಅಲ್ ಫಲಾಹ್ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್ ಗೋಳಿಕಟ್ಟೆ, ಉಡುಪಿ ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಜೀಜ್ ಹಾಗೂ ಗೋಳಿಕಟ್ಟೆ ಅಲ್ ಫಲಾಹ್ ಯಂಗ್ ಮೆನ್ಸ್ ಅಧ್ಯಕ್ಷ ಮಹಮ್ಮದ್ ಸಿರಾಜ್ ಉಪಸ್ಥಿತರಿದ್ದರು.

ಸಾಧಕರಿಗೆ, ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದವರಿಗೆ ಸನ್ಮಾನ
ಸಮಾಜಸೇವಕರಾದ ಅಕ್ಷರ ಸಂತ ಹರೇಕಳ ಹಾಜಬ್ಬ, ರವಿ ಕಟಪಾಡಿ ಹಾಗೂ ಫ್ರ್ಯಾಂಕಿ ಡಿಸೋಜ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮಸೀದಿ ನಿರ್ಮಾಣಕ್ಕೆ ವಿಶೇಷವಾಗಿ ಶ್ರಮಿಸಿದ ಹಬೀಬ್ ಗೋಳಿಕಟ್ಟೆ, ಮೊಹಮ್ಮದ್ ಅಲಿ ಗೋಳಿಕಟ್ಟೆ ಹಾಗೂ ನಿರ್ಮಾಣ ಕಾರ್ಯಕ್ಕೆ ಪ್ರೋತ್ಸಾಹ ನೀಡಿದವರನ್ನು ಗೌರವಿಸಲಾಯಿತು.

ಮಸೀದಿ ಕಟ್ಟಡದ ಇಂಜಿನಿಯರ್‌ಗಳಾದ ಉದಯಕುಮಾರ್ ಮತ್ತು ಅಬ್ದುಲ್ ಮಲಿಕ್, ಇಲೆಕ್ಟ್ರಿಷಿಯನ್ ಗುತ್ತಿಗೆದಾರ ಸಂತೋಷ ಶೆಟ್ಟಿ ಹಾಗೂ ಇಲೆಕ್ಟ್ರಿಷಿಯನ್ ಕೆಲಸಗಾರ ಸುಕುಮಾರ್ ಪೂಜಾರಿ ಅವರನ್ನು ಗುರುತಿಸಿ ಗೌರವಿಸಲಾಯಿತು.

ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು. ಗೋಳಿಕಟ್ಟೆ ಅಲ್ ಫಲಾಹ್ ಮಸೀದಿಯ ಖತೀಬರು ಪ್ರಾರ್ಥಿಸಿದರು. ಅಬ್ದುಲ್ ರಜಾಕ್ ವಂದಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಅಲ್ ಫಲಾಹ್ ಯಂಗ್ ಮೆನ್ಸ್ ತಂಡದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸರ್ವಧರ್ಮೀಯರ ಭೇಟಿ; ಮಸೀದಿಯ ಪರಿಚಯ
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿ ತನಕ ಸಾರ್ವಜನಿಕ ಮಸೀದಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜಮಾಅತೆ ಇಸ್ಲಾಮಿ ಹಿಂದ್‌ನ ಉಡುಪಿ ಘಟಕದ ಸದಸ್ಯರು ಹಾಗೂ ಮಹಿಳಾ ಸದಸ್ಯರು ಸಾರ್ವಜನಿಕರಿಗೆ ಮಸೀದಿಯ ವಿನ್ಯಾಸ, ಧಾರ್ಮಿಕ ಆಚರಣೆ ಮತ್ತು ಅದರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮಸೀದಿ ಸಂದರ್ಶನಕ್ಕೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಅಪಾರ ಸಂಖ್ಯೆಯ ಜನರು ಭೇಟಿ ನೀಡಿದ್ದು ವಿಶೇಷವಾಗಿತ್ತು. ಆಗಮಿಸಿದ ಎಲ್ಲರನ್ನೂ ಮುಸ್ಲಿಂ ಬಾಂಧವರು ಆತ್ಮೀಯವಾಗಿ ಬರಮಾಡಿಕೊಂಡರು. ಧರ್ಮಗಳ ನಡುವಿನ ಪರಸ್ಪರ ಗೌರವ, ವಿಶ್ವಾಸ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಸೌಹಾರ್ದತೆಗೆ ಸಾಕ್ಷಿಯಾಯಿತು.