


ಡೈಲಿವಾರ್ತೆ: 07/ನ./2026




ಮಂಗಳೂರು: ಗಸ್ತಿನ ಹೆಸರಿನಲ್ಲಿ ಯುವಕನಿಗೆ ಹಲ್ಲೆ, ಹಣ ಸುಲಿಗೆ ಆರೋಪ – ಇಬ್ಬರು ಪೊಲೀಸ್ ಸಿಬ್ಬಂದಿ ಬಂಧನ

ಮಂಗಳೂರು: ಗಸ್ತಿನ ಕರ್ತವ್ಯದ ನೆಪದಲ್ಲಿ ಹೊಯ್ಸಳ ವಾಹನದಲ್ಲಿ ಆಗಮಿಸಿ ಯುವಕನೊಬ್ಬನನ್ನು ತಡೆದು ಹಲ್ಲೆ ನಡೆಸಿ, ನಗದು ಹಾಗೂ ಎಟಿಎಂ ಕಾರ್ಡ್ಗಳನ್ನು ಬಲವಂತವಾಗಿ ಪಡೆದ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಶಿವರಾಜ್ ಮತ್ತು ಹಿರಣ್ಣ ಬೆನ್ನಿ ಎಂದು ಗುರುತಿಸಲಾಗಿದೆ. ಬಂಧಿತ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ವಿರುದ್ಧ ತನಿಖೆ ಮುಂದುವರಿದಿದೆ.
ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ವಿಟ್ಲ ನಿವಾಸಿ ರವಿರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ರವಿರಾಜ್ ಅವರು ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಯ್ಸಳ ವಾಹನದಲ್ಲಿ ಬಂದ ಇಬ್ಬರು ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಬಳಿಕ ಹಲ್ಲೆ ನಡೆಸಿ, ಮೊಬೈಲ್ ಕವರ್ನಲ್ಲಿದ್ದ ₹300 ನಗದು ಹಣವನ್ನು ಬಲವಂತವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಮುಂದುವರಿದಂತೆ ಮರುದಿನವೂ ಅದೇ ಸಿಬ್ಬಂದಿ ರವಿರಾಜ್ ಅವರನ್ನು ತಡೆದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ನ ಎರಡು ಎಟಿಎಂ ಕಾರ್ಡ್ಗಳು, ₹1,000 ನಗದು ಹಾಗೂ ಬೈಕ್ನ ಕೀಯನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ರವಿರಾಜ್ ಅವರ ಮೊಬೈಲ್ ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿನ ಹಣದ ವಿವರಗಳನ್ನು ಪರಿಶೀಲಿಸಿದ್ದಾರೆ. ₹2,000 ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ಅವರು ರವಿರಾಜ್ ಅವರ ಬೈಕ್ ವಶಕ್ಕೆ ಪಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುವ ಮೂಲಕ ಬಲವಂತವಾಗಿ ನಗದು ಹಣ ಪಡೆದಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಸೂಚನೆಯಂತೆ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳಾದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಉಮಾನಾಥ್ ವಿರುದ್ಧ ತನಿಖೆ ಮುಂದುವರಿದಿದೆ.

