


ಡೈಲಿವಾರ್ತೆ: 07/ನ./2026




ಬೆಂಗಳೂರಿನ ಭೀಕರ ಹತ್ಯಾಕಾಂಡದ ಸಂಚು ಬಯಲು! ಪತ್ನಿಯಿಂದ ಆರಂಭಿಸಿ ಒಂದೇ ಕುಟುಂಬದ ಏಳು ಮಂದಿಯನ್ನು ಹಂತ ಹಂತವಾಗಿ ಕೊಂದ ಆರೋಪಿ! ನಿದ್ದೆ ಮಾತ್ರೆ ಬೆರೆಸಿದ ಮದ್ಯ, ಮಾಂಸದೂಟ ನೀಡಿ ಹತ್ಯೆ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದ ಒಂದೇ ಕುಟುಂಬದ ಏಳು ಮಂದಿಯ ಸಾಮೂಹಿಕ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಆರೋಪಿ ಇಂದುಶೇಖರ್, ಬಳಿಕ ಅದೇ ಕುಟುಂಬದ ಆರು ಮಂದಿಯನ್ನು ಹಂತ ಹಂತವಾಗಿ ಹತ್ಯೆಗೈದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಸುಮಾರು 15 ದಿನಗಳ ಅವಧಿಯಲ್ಲಿ ಅಕ್ಟೋಬರ್ 14ರಿಂದ ನವೆಂಬರ್ 2ರವರೆಗೆ ನಡೆದ ಈ ಸರಣಿ ಹತ್ಯೆಗಳಲ್ಲಿ ಪೂರ್ವಯೋಜಿತ ಸಂಚು, ನಿದ್ದೆ ಮಾತ್ರೆಗಳ ಬಳಕೆ, ಮೃತದೇಹಗಳ ವಿಲೇವಾರಿ ಹಾಗೂ ಸಾಕ್ಷ್ಯ ನಾಶಪಡಿಸುವ ಪ್ರಯತ್ನಗಳು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಗಳಿಗೆ ಮುನ್ನವೇ ನಿದ್ದೆ ಮಾತ್ರೆಗಳು, ಮೃತದೇಹಗಳನ್ನು ತುಂಬಲು ಪ್ಲಾಸ್ಟಿಕ್ ಚೀಲಗಳು ಹಾಗೂ ಕಟ್ಟಲು ಹಗ್ಗ ಸೇರಿದಂತೆ ಅಗತ್ಯ ವಸ್ತುಗಳನ್ನು ಆರೋಪಿ ಖರೀದಿಸಿದ್ದ. ಹತ್ಯೆಗೀಡಾದವರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ವಿವಿಧ ಪ್ರದೇಶಗಳಲ್ಲಿ ಎಸೆದು, ಅವರ ಮೊಬೈಲ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಅನುಮಾನ ಮೂಡದಂತೆ ನೋಡಿಕೊಳ್ಳಲು ಯತ್ನಿಸಿದ್ದ. ಈ ಕೃತ್ಯಗಳಲ್ಲಿ ತನ್ನ ಅಪ್ರಾಪ್ತ ಮಗಳನ್ನೂ ಸಹಕರಿಸುವಂತೆ ಮಾಡಿದ್ದ ಎಂಬ ಆಘಾತಕಾರಿ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಪತ್ನಿಯ ಹತ್ಯೆಯೊಂದಿಗೆ ಆರಂಭವಾದ ಸರಣಿ ಕೃತ್ಯ:

ಅಕ್ಟೋಬರ್ 14ರಂದು ಪತ್ನಿ ಸುನೀತಾಳೊಂದಿಗೆ ಜಗಳವಾಡಿದ್ದ ಇಂದುಶೇಖರ್, ಆಕೆಯನ್ನು ಹತ್ಯೆಗೈಯಲು ನಿರ್ಧರಿಸಿದ್ದ. ತನ್ನ ಯೋಜನೆಯಂತೆ ಅಂದೇ ನಿದ್ದೆ ಮಾತ್ರೆಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಹಗ್ಗವನ್ನು ಖರೀದಿಸಿದ್ದ. ಅಕ್ಟೋಬರ್ 16ರಂದು ರಾತ್ರಿ ಮಾಂಸಾಹಾರದ ಅಡುಗೆ ಮಾಡಿ ಮದ್ಯ ಸೇವಿಸಿದ ಬಳಿಕ, ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತ್ನಿಗೆ ನೀಡಿದ್ದ ಎನ್ನಲಾಗಿದೆ.
ಸುನೀತಾ ಪ್ರಜ್ಞೆ ತಪ್ಪಿದ ಬಳಿಕ ರುಬ್ಬುವ ಕಲ್ಲಿನಿಂದ ಆಕೆಯ ತಲೆಗೆ ಹೊಡೆದು ಹತ್ಯೆಗೈದಿದ್ದ. ಈ ಘಟನೆಯನ್ನು ಅಪ್ರಾಪ್ತ ಮಗಳು ಕಣ್ಣಾರೆ ಕಂಡಿದ್ದಳು. ಬಳಿಕ ಆಕೆಯನ್ನು ತನ್ನ ಕೃತ್ಯಕ್ಕೆ ಸಹಕರಿಸುವಂತೆ ಮನವೊಲಿಸಿದ ಆರೋಪಿ, ಪತ್ನಿಯ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮನೆಯ ಬೆಡ್ರೂಮ್ನಲ್ಲಿರಿಸಿದ್ದ.
ಸುನೀತಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಆಕೆಯ ತಾಯಿ ರೂಪವತಿ ನಿರಂತರವಾಗಿ ಕರೆ ಮಾಡಿದ್ದರು. ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅಳಿಯ ಇಂದುಶೇಖರ್ನನ್ನು ಸಂಪರ್ಕಿಸಿ ಮಗಳ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಸುನೀತಾ ಮನೆಯಲ್ಲಿಯೇ ಇದ್ದಾಳೆ, ಮನೆಗೆ ಬರುವಂತೆ ರೂಪವತಿಗೆ ಆತ ತಿಳಿಸಿದ್ದ.
ಅತ್ತೆಯನ್ನೂ ಬಿಡದ ಆರೋಪಿ: ಮಾಂಸದೂಟದ ನೆಪದಲ್ಲಿ ಹತ್ಯೆ:
ಅಕ್ಟೋಬರ್ 18ರಂದು ಬೆಳಗ್ಗೆ ರೂಪವತಿ ಭಾಷ್ಯಂ ಸರ್ಕಲ್ ಸಮೀಪದ ಅಳಿಯನ ಮನೆಗೆ ಬಂದಿದ್ದರು. ಮಗಳು ಸುನೀತಾಳ ಬಗ್ಗೆ ವಿಚಾರಿಸಿದಾಗ ಆರೋಪಿ ಸಮರ್ಪಕ ಉತ್ತರ ನೀಡದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಇದೇ ಸಂದರ್ಭದಲ್ಲಿ ಅಪ್ರಾಪ್ತ ಮಗಳು ಅಜ್ಜಿಗೆ ಊಟ ಬಡಿಸುವ ನೆಪದಲ್ಲಿ ಮಾಂಸಾಹಾರ ನೀಡಿದ್ದಳು ಎನ್ನಲಾಗಿದೆ.
ಊಟ ಮಾಡುತ್ತಿದ್ದ ರೂಪವತಿಯ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಟಿವಿಯ ಧ್ವನಿಯನ್ನು ಜೋರಾಗಿ ಇಟ್ಟಿದ್ದ ಇಂದುಶೇಖರ್, ಹಿಂದಿನಿಂದ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ತಂದೆ-ಮಗಳು ಸೇರಿ ರೂಪವತಿಯ ಮೃತದೇಹವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದರು.
ಅಕ್ಟೋಬರ್ 19ರ ರಾತ್ರಿ ಸುನೀತಾ ಮತ್ತು ರೂಪವತಿಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದ ಆರೋಪಿ, ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎಸೆದಿದ್ದ. ಇಬ್ಬರ ಮೊಬೈಲ್ಗಳನ್ನು ತನ್ನ ಬಳಿಯೇ ಇರಿಸಿಕೊಂಡು ಅವರು ಇನ್ನೂ ಸಂಪರ್ಕದಲ್ಲಿದ್ದಾರೆ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವನ ಕುಟುಂಬವೇ ಮುಂದಿನ ಗುರಿ:
ಪತ್ನಿ ಮತ್ತು ಅತ್ತೆಯ ಹತ್ಯೆಯ ಬಳಿಕ ಆರೋಪಿ ತನ್ನ ಬಾವ ಶಿವಕುಮಾರ್ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದ. ಅಕ್ಟೋಬರ್ 23ರಂದು ಶಿವಕುಮಾರ್ ತನ್ನ ಅಕ್ಕ ಮತ್ತು ತಾಯಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಇಂದುಶೇಖರ್ಗೆ ಕರೆ ಮಾಡಿದಾಗ, ಸುನೀತಾ ಮತ್ತು ರೂಪವತಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದ. ಅಲ್ಲದೆ, ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಆಹ್ವಾನಿಸಿದ್ದ.
ಆತನ ಮಾತನ್ನು ನಂಬಿದ ಶಿವಕುಮಾರ್, ಅಕ್ಟೋಬರ್ 24ರಂದು ಪತ್ನಿ ದಿವ್ಯಾ ಹಾಗೂ ಪುತ್ರ ಪುನೀತ್ ಜೊತೆ ಅಕ್ಕನ ಮನೆಗೆ ಬಂದಿದ್ದರು. ಅಂದು ರಾತ್ರಿ ದಂಪತಿಗೆ ಮಾಂಸಾಹಾರದ ಊಟ ನೀಡಲಾಗಿದ್ದು, ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಲಾಗಿತ್ತು ಎನ್ನಲಾಗಿದೆ.
ದಿವ್ಯಾ ಮತ್ತು ಪುನೀತ್ ಬೆಡ್ರೂಮ್ನಲ್ಲಿ ಮಲಗಿದ್ದರೆ, ಶಿವಕುಮಾರ್ ಹಾಲ್ನಲ್ಲಿ ಮಲಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ, ರುಬ್ಬುವ ಕಲ್ಲಿನಿಂದ ಶಿವಕುಮಾರ್ ತಲೆಗೆ ಹೊಡೆದು ಹತ್ಯೆಗೈದಿದ್ದ. ಬಳಿಕ ಮೃತದೇಹವನ್ನು ಪ್ಯಾಕ್ ಮಾಡಿ ಅಡುಗೆಮನೆಯಲ್ಲಿ ಇರಿಸಲಾಗಿತ್ತು.
ಅಕ್ಟೋಬರ್ 25ರ ಮುಂಜಾನೆ ವಾಶ್ರೂಮ್ಗೆ ತೆರಳಲು ಎದ್ದ ದಿವ್ಯಾ, ಪತಿ ಕಾಣಿಸದಿದ್ದಾಗ ವಿಚಾರಿಸಿದ್ದರು. ಈ ವೇಳೆ ಆಕೆಯ ಮೇಲೂ ದಾಳಿ ನಡೆಸಿ ಹತ್ಯೆಗೈದಿದ್ದ. ತಾಯಿಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಬಾಲಕ ಪುನೀತ್ನನ್ನೂ ಆರೋಪಿ ಹತ್ಯೆ ಮಾಡಿದ್ದಾನೆ. ಬಳಿಕ ದಿವ್ಯಾ ಮತ್ತು ಪುನೀತ್ ಅವರ ಮೃತದೇಹಗಳನ್ನೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಲಾಗಿತ್ತು.
ಚಾಮುಂಡಿ ಬೆಟ್ಟದಲ್ಲಿ ಮೃತದೇಹಗಳ ವಿಲೇವಾರಿ
ಅಕ್ಟೋಬರ್ 27ರ ಮುಂಜಾನೆ ಶಿವಕುಮಾರ್, ದಿವ್ಯಾ ಮತ್ತು ಪುನೀತ್ ಅವರ ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಆರೋಪಿ ಮನೆಯಿಂದ ಹೊರಟಿದ್ದ. ಮೈಸೂರಿನ ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹಗಳನ್ನು ಎಸೆದಿದ್ದ. ಆದರೆ ಪುನೀತ್ನ ಮೃತದೇಹವನ್ನು ಬೆಂಗಳೂರಿಗೆ ವಾಪಸ್ ತಂದಿದ್ದ ಎನ್ನಲಾಗಿದೆ.
ಇದೇ ವೇಳೆ ದಿವ್ಯಾಳ ಮೊಬೈಲ್ನಿಂದ ಆಕೆಯ ತಾಯಿಗೆ ಸಂದೇಶ ಕಳುಹಿಸಿ, ಕುಟುಂಬ ಪ್ರವಾಸದಲ್ಲಿದೆ ಎಂದು ನಂಬಿಸುವ ಪ್ರಯತ್ನವನ್ನೂ ಮಾಡಿದ್ದ. ಹೀಗೆ ಹತ್ಯೆಗೀಡಾದವರ ಮೊಬೈಲ್ಗಳ ಮೂಲಕ ಅವರು ನಾಪತ್ತೆಯಾಗಿರುವ ಬಗ್ಗೆ ಅನುಮಾನ ಮೂಡದಂತೆ ನೋಡಿಕೊಳ್ಳಲು ಆರೋಪಿ ಯತ್ನಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಕುಟುಂಬದ ಮೇಲೂ ಸಂಚು: ದಂಪತಿಯ ಹತ್ಯೆ:
ಇಷ್ಟಕ್ಕೇ ತನ್ನ ಕೃತ್ಯ ನಿಲ್ಲಿಸದ ಇಂದುಶೇಖರ್, ಕುಟುಂಬದ ಮತ್ತಿಬ್ಬರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ. ಅಕ್ಟೋಬರ್ 31ರಂದು ಶಂಕರ್ ತನ್ನ ಅಕ್ಕ, ತಾಯಿ ಹಾಗೂ ಶಿವಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಯಾರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಇಂದುಶೇಖರ್ಗೆ ಕರೆ ಮಾಡಿದ್ದ. ಆಗ ಎಲ್ಲರೂ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸುಳ್ಳು ಹೇಳಿದ್ದ ಆರೋಪಿ, ಶಂಕರ್ ಮತ್ತು ಅವರ ಪತ್ನಿಯನ್ನು ಮನೆಗೆ ಆಹ್ವಾನಿಸಿದ್ದ.
ಅದರಂತೆ ನವೆಂಬರ್ 1ರಂದು ಶಂಕರ್, ಪತ್ನಿ ನಳಿನಿ ಹಾಗೂ ಪುತ್ರನೊಂದಿಗೆ ಮನೆಗೆ ಬಂದಿದ್ದರು. ಅಂದು ರಾತ್ರಿ ದಂಪತಿಗೆ ಮಾಂಸಾಹಾರದ ಊಟದೊಂದಿಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಲಾಗಿತ್ತು. ದಂಪತಿ ನಿದ್ರೆಗೆ ಜಾರಿದ ಬಳಿಕ ಅವರ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾನೆ.
ಬಳಿಕ ತಂದೆ-ಮಗಳು ಸೇರಿ ಶಂಕರ್ ಮತ್ತು ನಳಿನಿಯ ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿದ್ದರು. ಆದರೆ ಅವರ ಅಪ್ರಾಪ್ತ ಪುತ್ರನನ್ನು ತಕ್ಷಣ ಹತ್ಯೆ ಮಾಡಿರಲಿಲ್ಲ. ಈ ವೇಳೆಗಾಗಲೇ ಪುನೀತ್ನ ಮೃತದೇಹ ಕಾರಿನ ಡಿಕ್ಕಿಯಲ್ಲಿಯೇ ಇತ್ತು.
ನವೆಂಬರ್ 1ರ ರಾತ್ರಿ ಮೃತದೇಹಗಳನ್ನು ವಿಲೇವಾರಿ ಮಾಡಲು ಹೊರಟ ಆರೋಪಿ, ನವೆಂಬರ್ 2ರ ಮುಂಜಾನೆ ಶಿರಾಡಿ ಘಾಟ್ ಸಮೀಪ ಶಂಕರ್ ಮತ್ತು ನಳಿನಿಯ ಮೃತದೇಹಗಳನ್ನು ಎಸೆದಿದ್ದ. ಬಳಿಕ ಪುನೀತ್ನ ಮೃತದೇಹವನ್ನು ನಂದಿಬೆಟ್ಟದ ಸಮೀಪ ಎಸೆದಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಶಂಕರ್ ಮತ್ತು ನಳಿನಿಯ ಪುತ್ರನೂ ಆರೋಪಿಯೊಂದಿಗೆ ಇದ್ದ ಎಂಬ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಏಳು ಮಂದಿ ನಾಪತ್ತೆ: ಕುಟುಂಬಸ್ಥರಿಂದ ದೂರು
ಒಂದೇ ಕುಟುಂಬದ ಏಳು ಮಂದಿ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲಿ ಆತಂಕ ಹೆಚ್ಚಾಗಿತ್ತು. ನವೆಂಬರ್ 2ರಂದು ಕುಟುಂಬಸ್ಥರು ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ರಾತ್ರಿ ತಡವಾದ ಕಾರಣ ನವೆಂಬರ್ 3ರಂದು ನಳಿನಿಯ ತಾಯಿ ತುಂಗಮ್ಮ ಅವರು ಏಳು ಮಂದಿ ನಾಪತ್ತೆಯಾಗಿರುವ ಕುರಿತು ಅಧಿಕೃತ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿ, ನಾಪತ್ತೆಯಾದವರ ಮೊಬೈಲ್ ಕರೆಗಳ ವಿವರ, ಸಂಪರ್ಕದ ದಾಖಲೆಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಮೊಬೈಲ್ ಟವರ್ ಡಂಪ್ ವಿಶ್ಲೇಷಣೆಯಿಂದ ಮಹತ್ವದ ಸುಳಿವು ಲಭಿಸಿತ್ತು. ಒಂದೇ ಮೊಬೈಲ್ ನೆಟ್ವರ್ಕ್ ವ್ಯಾಪ್ತಿಯಲ್ಲಿ ಆರು ಮಂದಿಯ ಮೊಬೈಲ್ಗಳು ಕಾಣಿಸಿಕೊಂಡಿದ್ದು, ಅವುಗಳ ಪೈಕಿ ಇಂದುಶೇಖರ್ನ ಮೊಬೈಲ್ ಸಂಖ್ಯೆಯೂ ಸಕ್ರಿಯವಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ಈ ತಾಂತ್ರಿಕ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ 4ರಂದು ಇಂದುಶೇಖರ್ ಮತ್ತು ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆ ಆರೋಪಿಯೊಂದಿಗೆ ಇದ್ದ ಬಾಲಕನನ್ನೂ ರಕ್ಷಿಸಿದ್ದರು. ಬಳಿಕ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಒಂದೊಂದೇ ಹತ್ಯೆಗಳ ವಿವರ ಹಾಗೂ ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗಳ ಹಿಂದಿನ ಕಾರಣದ ಬಗ್ಗೆ ತನಿಖೆ
ಪತ್ನಿಯಿಂದ ಆರಂಭಿಸಿ ಅತ್ತೆ, ಬಾವ, ನಾದಿನಿ ಹಾಗೂ ಮಕ್ಕಳನ್ನು ಒಳಗೊಂಡಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪೂರ್ವಯೋಜಿತವಾಗಿ ಹತ್ಯೆಗಳಿಗೆ ಸಿದ್ಧತೆ ನಡೆಸಿದ್ದಲ್ಲದೆ, ಮೃತದೇಹಗಳನ್ನು ವಿವಿಧೆಡೆ ಸಾಗಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸದ್ಯ ಹತ್ಯೆಗಳ ಹಿಂದಿನ ನಿಖರ ಕಾರಣ, ಆರೋಪಿಯ ಸಂಚಿನ ಸ್ವರೂಪ, ಅಪ್ರಾಪ್ತರ ಪಾತ್ರ ಹಾಗೂ ಸಾಕ್ಷ್ಯ ನಾಶಪಡಿಸಲು ನಡೆಸಿದ ಪ್ರಯತ್ನಗಳ ಕುರಿತು ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

