ಡೈಲಿವಾರ್ತೆ: 07/ನ./2026

ಪಂಚವರ್ಣದ 29ನೇ ವರ್ಷದ ಕನ್ನಡ ರಾಜ್ಯೋತ್ಸವ ಸದ್ಭಾವನಾ-2026 ಸಂಭ್ರಮ | ಡಾ. ಜಿ. ಶಂಕರ್‌ಗೆ ಪಂಚವರ್ಣ ರಾಜ್ಯೋತ್ಸವ ಗೌರವ, ಕಂಡ್ಲೂರು ಶ್ರೀನಿವಾಸ ಜೋಗಿಗೆ ವಿಶೇಷ ಪುರಸ್ಕಾರ:
ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕೋಟ: ಅಧಿಕಾರ, ರಾಜಕೀಯ ಸ್ಥಾನಮಾನ ಹಾಗೂ ಪ್ರಶಸ್ತಿಗಳಿಗಿಂತ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ ನಾಡೋಜ ಡಾ. ಜಿ. ಶಂಕರ್ ಅವರು ವಿಶಿಷ್ಟ ವ್ಯಕ್ತಿತ್ವದವರು. ತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿರುವ ಅವರು ಶಿಕ್ಷಣ, ಆರೋಗ್ಯ ಹಾಗೂ ಮೀನುಗಾರರ ಕಲ್ಯಾಣ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನ. 6ರಂದು ಸಂಜೆ ಕೋಟದ ಮಾಂಗಲ್ಯ ಮಂದಿರದ ಮುಂಭಾಗದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಪಂಚವರ್ಣ ಯುವಕ ಮಂಡಲ (ರಿ.) ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆದ 29ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಸದ್ಭಾವನಾ-2026 ಕಾರ್ಯಕ್ರಮದಲ್ಲಿ ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನಿಸಿ ಅವರು ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಅಗತ್ಯವಿದ್ದಾಗ ನೆರವಿಗೆ ಧಾವಿಸುವ ಡಾ. ಜಿ. ಶಂಕರ್ ಅವರ ಗುಣ ಮೆಚ್ಚುವಂತಹದ್ದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕವೂ ಸಂಕಷ್ಟದಲ್ಲಿರುವವರಿಗೆ ನೆರವು ದೊರಕಿಸಿಕೊಡುವಲ್ಲಿ ಅವರು ಸಹಕರಿಸಿದ್ದಾರೆ. ಸಮಾಜದಲ್ಲಿ ಸಂಘರ್ಷಕ್ಕಿಂತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಒಗ್ಗಟ್ಟು ಬೆಳೆಸುವ ಅಗತ್ಯವಿದೆ. ಇಂತಹ ಸಮಾಜಮುಖಿ ವ್ಯಕ್ತಿಯನ್ನು ಗುರುತಿಸಿ ಗೌರವಿಸಿರುವ ಪಂಚವರ್ಣ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದರು.

ಸಮಾಜ ಸೇವಕರಿಗೆ ಗೌರವ ಸಲ್ಲಲಿ: ಡಾ. ಜಿ. ಶಂಕರ್:

ಪಂಚವರ್ಣ ರಾಜ್ಯೋತ್ಸವ ಗೌರವ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯುವ ಸಂಘಟನೆಗಳಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಸನ್ಮಾನಗಳು ನಿಜವಾದ ಸಾಧಕರಿಗೆ ಸಲ್ಲಬೇಕು. ಆರ್ಥಿಕವಾಗಿ ಸಬಲರಾಗಿರುವವರಿಗಿಂತ ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ಹಾಗೂ ತೆರೆಮರೆಯಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಬೇಕು ಎಂದು ಹೇಳಿದರು.
ಪಂಚವರ್ಣ ಯುವಕ ಮಂಡಲದ ಪರಿಸರ ಕಾಳಜಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ರಕ್ತದಾನ, ಆರೋಗ್ಯ ಸೇವೆ ಸೇರಿದಂತೆ ಜನೋಪಯೋಗಿ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಯುವ ಸಂಘಟನೆಗಳು ಹೊಸ ಪರಿಕಲ್ಪನೆಗಳೊಂದಿಗೆ ಸಮಾಜದ ಒಳಿತಿಗೆ ಶ್ರಮಿಸಬೇಕು. ಸಂಘಟನೆಯ ಉತ್ತಮ ಕಾರ್ಯಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಸಮಾಜ ಸೇವೆಗೆ ಹಣವೊಂದೇ ಮುಖ್ಯವಲ್ಲ: ಶ್ರೀನಿವಾಸ ಜೋಗಿ:

ಪಂಚವರ್ಣ ವಿಶೇಷ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಉದ್ಯಮಿ ಕಂಡ್ಲೂರು ಕೆ.ಎನ್. ಶ್ರೀನಿವಾಸ ಜೋಗಿ, ಸಮಾಜ ಸೇವೆ ಮಾಡಲು ಹಣವೊಂದೇ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ, ರೈತರಿಗೆ ಪ್ರೋತ್ಸಾಹ ಹಾಗೂ ಅಶಕ್ತರಿಗೆ ನೆರವು ಸೇರಿದಂತೆ ಹಲವು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

ತಮ್ಮ ಬಾಲ್ಯದ ದಿನಗಳನ್ನು ಕೋಟದಲ್ಲಿ ಕಳೆದಿರುವುದನ್ನು ಸ್ಮರಿಸಿದ ಅವರು, ಕೋಟದಲ್ಲಿ ಸೈಕಲ್ ಕಲಿತಿದ್ದು, ವರ್ಣತೀರ್ಥದಲ್ಲಿ ಈಜು ಕಲಿತಿದ್ದು ಸೇರಿದಂತೆ ಇಲ್ಲಿನ ನೆನಪುಗಳು ಸದಾ ಹಸಿರಾಗಿವೆ. ಹಣ ಸಂಪಾದಿಸುವುದರ ಜೊತೆಗೆ ಜನರ ಪ್ರೀತಿ ಮತ್ತು ವಿಶ್ವಾಸವನ್ನೂ ಸಂಪಾದಿಸಬೇಕು ಎಂಬುದನ್ನು ತಂದೆ ನರಸಿಂಹ ಜೋಗಿಯವರು ಕಲಿಸಿಕೊಟ್ಟಿದ್ದರು. ಆದಾಯದ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಬೇಕು ಎಂಬ ಅವರ ಮಾರ್ಗದರ್ಶನವೇ ತಮ್ಮ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಿದೆ ಎಂದರು.
ಮಾರಣಕಟ್ಟೆ ಮಂಜರು,ಆನಂದ ಸಿ ಕುಂದರ್, ಡಾ. ಜಿ. ಶಂಕರ್ ಹಾಗೂ ಸಂಪತ್ ಕುಮಾರ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳು ತಮಗೆ ಪ್ರೇರಣೆಯಾಗಿವೆ ಎಂದು ತಿಳಿಸಿದರು. ತಮ್ಮ ಸೇವಾ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಸಹೋದರ ಚಂದ್ರಶೇಖರ್ ಜೋಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

29 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯ: ಆನಂದ ಸಿ. ಕುಂದರ್:

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಪಂಚವರ್ಣ ಯುವಕ ಮಂಡಲ ಕೋಟ ಪರಿಸರದ ಹೆಮ್ಮೆಯ ಸಂಸ್ಥೆಯಾಗಿದ್ದು, ಪ್ರತಿವರ್ಷ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತೀ ಭಾನುವಾರ 30ರಿಂದ 40 ಜನರ ತಂಡದೊಂದಿಗೆ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ರೈತರಿಗೆ ಪ್ರೋತ್ಸಾಹ, ಮಕ್ಕಳ ಶಿಕ್ಷಣಕ್ಕೆ ಸಹಕಾರ, ಮಳೆಗಾಲದಲ್ಲಿ ಗಿಡ ನೆಡುವಿಕೆ ಹಾಗೂ ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.

ಸಮಾಜದ ಕಣ್ಣೀರು ಒರೆಸುವುದೇ ಸಂಘಟನೆಯ ಯಶಸ್ಸು: ಸಂಪತ್ ಕುಮಾರ್ ಶೆಟ್ಟಿ:

ಶುಭಾಶಂಸನೆಗೈದ ಶ್ರೀಕೃಷ್ಣಪ್ರಸಾದ್ ಫೌಂಡೇಶನ್, ವಂಡಾರು ಇದರ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ, ಪಂಚವರ್ಣ ಯುವಕ ಮಂಡಲ ಕಳೆದ 29 ವರ್ಷಗಳಿಂದ ಪ್ರಚಾರದ ಅಪೇಕ್ಷೆಯಿಲ್ಲದೆ ಸಮಾಜಮುಖಿ ಚಿಂತನೆಗಳೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಂಘಟನೆಯ ಯಶಸ್ಸನ್ನು ಕಾರ್ಯಕ್ರಮಗಳ ವೈಭವದಿಂದ ಅಳೆಯದೆ, ಸಮಾಜದ ಎಷ್ಟು ಜನರ ಕಣ್ಣೀರು ಒರೆಸಿದೆ, ಎಷ್ಟು ಕುಟುಂಬಗಳಿಗೆ ನೆರವಾಗಿದೆ ಹಾಗೂ ಸಮಾಜಕ್ಕೆ ಎಷ್ಟು ಕೊಡುಗೆ ನೀಡಿದೆ ಎಂಬುದರ ಆಧಾರದಲ್ಲಿ ಅಳೆಯಬೇಕು ಎಂದರು.

ವಿಶೇಷ ಪುರಸ್ಕೃತರನ್ನು ಗೌರವಿಸಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಪಂಚವರ್ಣ ಯುವಕ ಮಂಡಲ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಡಾ. ಜಿ. ಶಂಕರ್ ಅವರು ತಮ್ಮ ಸಂಪಾದನೆಯಿಂದ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು, ರಕ್ತದಾನ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಇಂತಹ ಸಾಧಕರ ಕಾರ್ಯಗಳು ಸಮಾಜದ ಸಂಘಟನೆಗಳಿಗೆ ಪ್ರೇರಣೆಯಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಮುಂಬೈ ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ, ಮಣಿಪಾಲ ಸೃಷ್ಟಿ ಇಂಜಿನಿಯರಿಂಗ್ ಮಾಲಕ ಜಯರಾಜ್ ವಿ. ಶೆಟ್ಟಿ, ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರನಾಥ ಹೊಳ್ಳ, ಶ್ರೀದೇವಿ ಜ್ಯುವೆಲ್ಲರ್ಸ್ ಮಾಲಕ ಸೀತಾರಾಮ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಮೊಗವೀರ ಸಂಘಟನೆಯ ರವೀಶ್ ಕುಂಭಾಶಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಹಾಗೂ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.

ಶಬರಿ ಕನ್ಸ್ಟ್ರಕ್ಷನ್ ಮಾಲಕ ಸುರೇಶ್ ಕಾಂಚನ್ ಅವರು ಡಾ. ಜಿ. ಶಂಕರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ವಿವಿಧ ದತ್ತಿನಿಧಿಗಳಿಗೆ ಸಹಾಯಧನ, ಮಕ್ಕಳಿಗೆ ಸಮವಸ್ತ್ರ ವಿತರಣೆ
ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ನಿಧಿ, ಶ್ರೀಕೃಷ್ಣಪ್ರಸಾದ್ ಫೌಂಡೇಶನ್ ವಿದ್ಯಾನಿಧಿ, ಸಂತೋಷ್ ಮೇಷ್ಟ್ರು ಸ್ಮರಣಾರ್ಥ ಶೈಕ್ಷಣಿಕ ದತ್ತಿನಿಧಿ ಹಾಗೂ ನಿಸ್ವಾರ್ಥ ಸೇವಾ ಟ್ರಸ್ಟ್‌ಗೆ ಸಹಾಯಧನ ವಿತರಿಸಲಾಯಿತು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ನರೇಂದ್ರ ಕುಮಾರ್ ಕೋಟ ಅವರ ‘ಬತ್ತದ ಹಜ್ಜೆ’ ಪುಸ್ತಕವನ್ನು ಡಾ. ಜಿ. ಶಂಕರ್ ಬಿಡುಗಡೆಗೊಳಿಸಿದರು.

ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಹಾಗೂ ಸುಜಾತ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಮಾಡಿ ಅಂಗನವಾಡಿ, ಮಯೂರಿ ನೃತ್ಯ ತಂಡ ಕುಂಭಾಶಿ, ಹಂದಟ್ಟು ಮಹಿಳಾ ಬಳಗ ಹಾಗೂ ಪಂಚವರ್ಣ ಮಹಿಳಾ ಮಂಡಲದಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು. ಚೈತನ್ಯ ಕಲಾವಿದರು, ಬೈಲೂರು ಇವರಿಂದ ‘ರಾಘು ಮಾಸ್ಟ್ರ್’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.