ಡೈಲಿವಾರ್ತೆ: 11/ನ./2026

ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 300 ಬಾಕ್ಸ್ ಗೋವಾ ಮದ್ಯ ಜಪ್ತಿ, ನಾಲ್ವರು ಆರೋಪಿಗಳು ವಶಕ್ಕೆ

ಉಡುಪಿ: ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಪಡುಬಿದ್ರಿ ಪೊಲೀಸರು ಹೆಜಮಾಡಿ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು 300 ಬಾಕ್ಸ್ ಮದ್ಯವನ್ನು ಜಪ್ತಿ ಮಾಡಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಮಹೀಂದ್ರ ಪಿಕಪ್ ಹಾಗೂ ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋವಾದಿಂದ ಮಂಗಳೂರಿನತ್ತ ಮಹೀಂದ್ರ ಪಿಕಪ್ ಮತ್ತು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬ್ಲೂ ಓಷಿಯನ್ ವಿಸ್ಕಿ ಬ್ರ್ಯಾಂಡ್‌ನ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಚೆಕ್‌ಪೋಸ್ಟ್ ಸಮೀಪ ಕಾರ್ಯಾಚರಣೆ ನಡೆಸಿ, ಎರಡೂ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 300 ಬಾಕ್ಸ್ ಮದ್ಯ ಪತ್ತೆಯಾಗಿದ್ದು, ಸಂಪೂರ್ಣ ಮದ್ಯದ ದಾಸ್ತಾನನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಮದ್ಯ ಸಾಗಾಟಕ್ಕೆ ಬಳಸಿದ್ದ ಎರಡೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ