


ಡೈಲಿವಾರ್ತೆ: 11/ನ./2026




ಬೆಂಗಳೂರು: ಪಟಾಕಿ ಸಿಡಿತಕ್ಕೆ ಗರ್ಭಿಣಿ ಸೇರಿ ಆರು ಮಂದಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು, ನ.11: ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಸಿಡಿತದ ಅವಘಡಗಳು ಮುಂದುವರಿದಿದ್ದು, ನಗರದಲ್ಲಿ ಗರ್ಭಿಣಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡವರಲ್ಲಿ 11, 14 ಮತ್ತು 9 ವರ್ಷದ ಮೂವರು ಬಾಲಕರು, 9 ವರ್ಷದ ಬಾಲಕಿ ಹಾಗೂ 21 ಮತ್ತು 27 ವರ್ಷದ ಇಬ್ಬರು ಮಹಿಳೆಯರು ಸೇರಿದ್ದಾರೆ. ಈ ಪೈಕಿ 21 ವರ್ಷದ ಗರ್ಭಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತೊಡೆಯ ಮೇಲೆ ಪಟಾಕಿ ಬಾಕ್ಸ್ ಇರಿಸಿಕೊಂಡಿದ್ದ ಸಂದರ್ಭದಲ್ಲಿ ಕಿಡಿ ತಗುಲಿ, ಬಾಕ್ಸ್ನಲ್ಲಿದ್ದ ಪಟಾಕಿಗಳು ಏಕಕಾಲದಲ್ಲಿ ಸಿಡಿದ ಪರಿಣಾಮ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇನ್ನೊಂದು ಘಟನೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಪಟಾಕಿ ಸಿಡಿತದಿಂದ ಗಾಯಗಳಾಗಿವೆ. ಮತ್ತೊಂದು ಅವಘಡದಲ್ಲಿ ಮೂವರು ಮಕ್ಕಳ ಮುಖದ ಚರ್ಮ ಸುಟ್ಟಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪಟಾಕಿ ಸಿಡಿತದ ಅವಘಡಗಳು ನಿರಂತರವಾಗಿ ವರದಿಯಾಗುತ್ತಿದ್ದು, ಇದೀಗ ಮತ್ತೆ ಆರು ಮಂದಿ ಗಾಯಗೊಂಡಿರುವುದು ಆತಂಕ ಮೂಡಿಸಿದೆ.
ವಿಶೇಷವಾಗಿ ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುವವರು ಹಾಗೂ ಸುತ್ತಮುತ್ತ ನಿಂತು ವೀಕ್ಷಿಸುವವರೂ ಪಟಾಕಿ ಅವಘಡಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಗಾಯಾಳುಗಳ ಆರೋಗ್ಯ ಸ್ಥಿತಿ ಹಾಗೂ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಎನ್.ಎ. ಯೋಗೇಶ್ವರಪ್ಪ ಮಾಹಿತಿ ನೀಡಿದ್ದಾರೆ.
ಪಟಾಕಿ ಸಿಡಿಸುವವರಿಗಿಂತ ವೀಕ್ಷಕರಿಗೇ ಹೆಚ್ಚು ಅಪಾಯ!
ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪಟಾಕಿ ಸಿಡಿತದಿಂದ ಸಂಭವಿಸುತ್ತಿರುವ ಅವಘಡಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಈಗಾಗಲೇ 150ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿದ್ದು, ಪಟಾಕಿ ಸಿಡಿಸುವವರಿಗಿಂತಲೂ ಅವುಗಳನ್ನು ವೀಕ್ಷಿಸುತ್ತಿದ್ದವರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶೇಷವಾಗಿ ರಸ್ತೆಯಲ್ಲಿ ತೆರಳುತ್ತಿದ್ದವರು, ಪಟಾಕಿ ಸಿಡಿತವನ್ನು ವೀಕ್ಷಿಸುತ್ತಿದ್ದವರು ಹಾಗೂ ಪುಟ್ಟ ಮಕ್ಕಳು ಪಟಾಕಿಯ ಕಿಡಿಗೆ ಸಿಲುಕಿ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಹೀಗಾಗಿ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೂ ಅಪಾಯವಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

