


ಡೈಲಿವಾರ್ತೆ: 11/ನ./2026




ನ.14 ರಂದು ವಿಶ್ವ ಮಧುಮೇಹ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ : ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವಯಸ್ಕರ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ, ಲಯನ್ಸ್ ಕ್ಲಬ್, ಬಂಟ್ವಾಳದ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಹಾಗೂ ಅದರ ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನವೆಂಬರ್ 14 ರಂದು ವಿಶೇಷ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
2026 ರ ವಿಶ್ವ ಮಧುಮೇಹ ದಿನದ ಸಂದೇಶವಾದ “ಮಧುಮೇಹದ ವಿರುದ್ಧ ಆರಂಭದಲ್ಲೇ ಕ್ರಮ” (Early Action on Diabetes) ಎಂಬ ಆಶಯದೊಂದಿಗೆ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಲಯನ್ಸ್ ಸೇವಾ ಮಂದಿರ, ಬಿ.ಸಿ. ರಸ್ತೆ, ಬಂಟ್ವಾಳದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ಸಾಮಾನ್ಯ ವೈದ್ಯಕೀಯ ಮತ್ತು ಮೂತ್ರಪಿಂಡ ಶಾಸ್ತ್ರ ವಿಭಾಗದ ತಜ್ಞರಾದ ಡಾ. ಅಮಿತ್ ವಿಜಯ್ ಲಿಯೋನ್ ಡಿ’ಸೋಜಾ ಅವರು ಮಧುಮೇಹ ಮತ್ತು ಅದರ ತಡೆಗಟ್ಟುವಿಕೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಶ್ರೀಮತಿ ಸ್ಯಾಂಡಿಸ್ ಜೋಸೆಫ್ ಅವರು ನೈಸರ್ಗಿಕ ಆಹಾರ ಪದ್ಧತಿಯ ಮೂಲಕ ಮಧುಮೇಹ ನಿಯಂತ್ರಣ ಕುರಿತು ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ನಾರಾಯಣ ಗುರು ವೃತ್ತದಿಂದ ಲಯನ್ಸ್ ಸೇವಾ ಮಂದಿರದವರೆಗೆ ಮಧುಮೇಹ ಜಾಗೃತಿ ನಡಿಗೆ ನಡೆಯಲಿದೆ. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಧುಮೇಹ ಜಾಗೃತಿ ರಸಪ್ರಶ್ನೆ, ಪಾತ್ರಾಭಿನಯ ಹಾಗೂ ಶೈಕ್ಷಣಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಅದೇ ರೀತಿ, ಬೆಳಿಗ್ಗೆ 9:30ರಿಂದ ಮಧ್ಯಾಹ್ನ 12:30ರವರೆಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ (GRBS), ರಕ್ತದೊತ್ತಡ (BP), ದೇಹದ ದ್ರವ್ಯರಾಶಿ ಸೂಚ್ಯಂಕ (BMI), ದಂತ ತಪಾಸಣೆ, ದೃಷ್ಟಿ ತಪಾಸಣೆ, ಚರ್ಮರೋಗ ತಪಾಸಣೆ ಹಾಗೂ ಉಚಿತ ಆಹಾರ ಸಮಾಲೋಚನೆ (Diet Counselling) ಸೌಲಭ್ಯಗಳು ಲಭ್ಯವಿರುತ್ತವೆ. ಅಗತ್ಯವಿರುವವರಿಗೆ ಹೆಚ್ಚಿನ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುವುದು.
ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ, ವೈದ್ಯಕೀಯ ಸಲಹೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಪಾಲಿಸುವುದರಿಂದ ಅದರ ಪರಿಣಾಮಗಳನ್ನು ನಿಯಂತ್ರಿಸಬಹುದು. ಆದ್ದರಿಂದ ಸಾರ್ವಜನಿಕರು, ವಿಶೇಷವಾಗಿ ಮಧುಮೇಹದ ಅಪಾಯದ ಅಂಶಗಳನ್ನು ಹೊಂದಿರುವವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಮನವಿ ಮಾಡಿದ್ದಾರೆ.

