


ಡೈಲಿವಾರ್ತೆ: 11/ನ./2026




ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಫ್ಲೈಓವರ್ನಿಂದ 40 ಅಡಿ ಕೆಳಗೆ ಬಿದ್ದ ಬೈಕ್ ಸವಾರ – ಹೆಲ್ಮೆಟ್ನಿಂದ ಉಳಿಯಿತು ಜೀವ!

ಬಂಟ್ವಾಳ: ಬಿ.ಸಿ.ರೋಡಿನ ಫ್ಲೈಓವರ್ ಮೇಲೆ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರನೋರ್ವ ಸುಮಾರು 40 ಅಡಿ ಎತ್ತರದಿಂದ ಕೆಳಗಿನ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟ ಘಟನೆ ಮಂಗಳವಾರ ನಡೆದಿದೆ. ಅಪಘಾತದ ತೀವ್ರತೆಗೆ ಫ್ಲೈಓವರ್ ಮೇಲಿನಿಂದ ಕೆಳಕ್ಕೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದರೂ, ಹೆಲ್ಮೆಟ್ ಧರಿಸಿದ್ದ ಪರಿಣಾಮ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಅವ್ ನೀಲ್ ಸಾವಿಯೋ ಡಿಸೋಜ ಎಂದು ಗುರುತಿಸಲಾಗಿದೆ. ಇವರು ಬಿ.ಸಿ.ರೋಡಿನ ಫ್ಲೈಓವರ್ ಮೇಲೆ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ದಿಯಾ ಕೊಠಾರಿ ಎಂಬಾಕೆ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಅವ್ ನೀಲ್ ಸಾವಿಯೋ ಡಿಸೋಜ ಅವರು ಸುಮಾರು 40 ಅಡಿ ಎತ್ತರದ ಫ್ಲೈಓವರ್ ಮೇಲಿನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ಅವರ ಎದೆ, ಎಡ ಭುಜ, ಹೊಟ್ಟೆ, ಬೆನ್ನು ಹಾಗೂ ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಅಪಘಾತದ ತಕ್ಷಣ ಸ್ಥಳೀಯರು ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಫ್ಲೈಓವರ್ನಿಂದ ಭಾರೀ ಎತ್ತರದಿಂದ ಕೆಳಕ್ಕೆ ಬಿದ್ದಿದ್ದರೂ ಹೆಲ್ಮೆಟ್ ಧರಿಸಿದ್ದ ಕಾರಣ ತಲೆಗೆ ಗಂಭೀರ ಗಾಯವಾಗುವುದರಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮತ್ತೊಂದು ಬೈಕ್ ಚಲಾಯಿಸುತ್ತಿದ್ದ ದಿಯಾ ಕೊಠಾರಿ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

