ಡೈಲಿವಾರ್ತೆ: 11/ನ./2026

ಖಾಕಿ ಮೇಲೆಯೇ ಕಾರು ಹತ್ತಿಸಿದ ದುಷ್ಕರ್ಮಿಗಳು: 200 ಮೀಟರ್ ಬಾನೆಟ್ ಮೇಲೆ ಸಿಬ್ಬಂದಿಯನ್ನು ಎಳೆದೊಯ್ದು ಚಾಲಕ ಪರಾರಿ!

ಮುಂಬೈ: ನವಿ ಮುಂಬೈನ ಕಳಂಬೋಲಿ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು, ಅವರನ್ನು ಸುಮಾರು 200 ಮೀಟರ್‌ ದೂರದವರೆಗೆ ಬಾನೆಟ್ ಮೇಲೆ ಎಳೆದೊಯ್ದು ಚಾಲಕ ಪರಾರಿಯಾಗಿರುವ ಗಂಭೀರ ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ದಿಲೀಪ್ ಭೋಯಿ ಎಂದು ಗುರುತಿಸಲಾಗಿದೆ. ಕಳಂಬೋಲಿ ಪ್ರದೇಶದಲ್ಲಿ ಪೊಲೀಸರು ವಾಹನಗಳ ನಿಯಮಿತ ತಪಾಸಣೆ ನಡೆಸುತ್ತಿದ್ದ ವೇಳೆ, ವೇಗವಾಗಿ ಬಂದ ಸ್ವಿಫ್ಟ್ ಡಿಸೈರ್ ಕಾರನ್ನು ತಡೆಯಲು ಕಾನ್‌ಸ್ಟೇಬಲ್ ದಿಲೀಪ್ ಭೋಯಿ ಮುಂದಾಗಿದ್ದರು. ಈ ವೇಳೆ ಚಾಲಕ ಕಾರನ್ನು ನಿಲ್ಲಿಸುವ ಬದಲು ಪೇದೆಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಕಾನ್‌ಸ್ಟೇಬಲ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ಆದರೂ ಚಾಲಕ ವಾಹನವನ್ನು ನಿಲ್ಲಿಸದೆ ಸುಮಾರು 200 ಮೀಟರ್‌ ದೂರದವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಪೇದೆಯನ್ನು ರಸ್ತೆಗೆ ಬೀಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಿಂದ ದಿಲೀಪ್ ಭೋಯಿ ಅವರಿಗೆ ತೀವ್ರ ಗಾಯಗಳಾಗಿವೆ.

ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು ಎನ್ನಲಾಗಿದ್ದು, ವಾಹನಕ್ಕೆ ನಕಲಿ ನೋಂದಣಿ ಸಂಖ್ಯೆಯ ಫಲಕ ಅಳವಡಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಕಾರಿನಲ್ಲಿದ್ದ ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ, ಸಿಬ್ಬಂದಿಯ ಜೀವಕ್ಕೆ ಅಪಾಯ ತಂದಿರುವ ಈ ಘಟನೆ ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ.