


ಡೈಲಿವಾರ್ತೆ: 25/ನ./2026




ಶೂ ಒಳಗೆ ಚಿನ್ನದ ಮಿಶ್ರಣ ಅಡಗಿಸಿ ಸಾಗಾಟ; 1.37 ಕೋಟಿ ರೂ. ಮೌಲ್ಯದ ಚಿನ್ನ ವಶ, ಆರೋಪಿ ಬಂಧನ

ಮಂಗಳೂರು: ಶೂ ಒಳಗೆ ಮಿಶ್ರಣದ ರೂಪದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಕೋಝಿಕ್ಕೋಡ್ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಆರೋಪಿಯಿಂದ ಸುಮಾರು 1.37 ಕೋಟಿ ರೂ. ಮೌಲ್ಯದ 1.085 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ನಿವಾಸಿ ನೌಶಾದ್ (43) ಎಂದು ಗುರುತಿಸಲಾಗಿದೆ. ಈತ ಶಾರ್ಜಾದಿಂದ ವಿಮಾನದ ಮೂಲಕ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಮೂಲಕ ಚಿನ್ನ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ರಹಸ್ಯ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ನೌಶಾದ್ ಧರಿಸಿದ್ದ ಶೂ ಒಳಗೆ ವಿಶೇಷ ರೀತಿಯಲ್ಲಿ ಮಿಶ್ರಣದ ರೂಪದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ಬಳಿಕ ಅಧಿಕಾರಿಗಳು ಮಿಶ್ರಣವನ್ನು ಪ್ರತ್ಯೇಕಿಸಿ ಪರಿಶೀಲಿಸಿದಾಗ ಅದರಿಂದ ಒಟ್ಟು 1.085 ಕಿಲೋಗ್ರಾಂ ಶುದ್ಧ ಚಿನ್ನವನ್ನು ಹೊರತೆಗೆದಿದ್ದಾರೆ.
ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ ಸುಮಾರು 1.37 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಡಿಆರ್ಐ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

