


ಡೈಲಿವಾರ್ತೆ: 25/ನ./2026




ದುಬೈಯಲ್ಲಿ ಬಸ್,ಲಾರಿ ನಡುವೆ ಭೀಕರ ಅಪಘಾತ: 11 ಭಾರತೀಯರು ಸೇರಿ 13 ಮಂದಿ ದುರ್ಮರಣ, 26 ಜನರಿಗೆ ಗಾಯ!

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ರಾಸ್ ಅಲ್ ಖೈಮಾದಲ್ಲಿ ಪ್ರಯಾಣಿಕ ಬಸ್ ಮತ್ತು ರಸ್ತೆಬದಿಯಲ್ಲಿ ನಿಲುಗಡೆಗೊಳಿಸಿದ್ದ ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಭಾರತೀಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 26 ಜನರು ಗಾಯಗೊಂಡಿದ್ದಾರೆ.
ನವೆಂಬರ್ 24ರ ಮಂಗಳವಾರ ಮುಂಜಾನೆ ಸುಮಾರು 1 ಗಂಟೆಗೆ ಅಲ್ ಮನೈ ಸಮೀಪದ ಅಲ್ ವತನ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾಲಕ ಸೇರಿದಂತೆ ಒಟ್ಟು 41 ಮಂದಿ ಪ್ರಯಾಣಿಸುತ್ತಿದ್ದ ಬಸ್, ಯಾಂತ್ರಿಕ ದೋಷದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ರಾಸ್ ಅಲ್ ಖೈಮಾ ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಬಸ್ಸಿನಲ್ಲಿದ್ದ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮಲಯಾಳಂ ಮಾಧ್ಯಮಗಳ ವರದಿಯ ಪ್ರಕಾರ, ಮೃತಪಟ್ಟವರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಇಬ್ಬರು ಯುವಕರು ಸೇರಿದ್ದಾರೆ. ತಲಸ್ಸೇರಿ ಸಮೀಪದ ಪನ್ನಿಯೂರ್ ನಿವಾಸಿ ಸಂಕೀರ್ಥ ಸುರೇಶ್ (26) ಹಾಗೂ ಮಟ್ಟನೂರು ಸಮೀಪದ ಅರುವಾಚಲ್ ನಿವಾಸಿ ಹೇಮಂತ್ ಪುಥಿಯಕಾವಿಲ್ (29) ಮೃತರು ಎಂದು ಗುರುತಿಸಲಾಗಿದೆ. ಗುಜರಾತ್ನ ಮಹಿಮಾ ಸೋನಿ ಮತ್ತು ತಮಿಳುನಾಡಿನ ವಿನೋದ್ ಕುಮಾರ್ ಅವರ ಸಾವನ್ನು ಕುಟುಂಬಸ್ಥರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟ 13 ಮಂದಿಯ ಪೈಕಿ 11 ಮಂದಿ ಭಾರತೀಯರು ಎನ್ನಲಾಗಿದ್ದು, ಮೃತರ ಸಂಪೂರ್ಣ ಅಧಿಕೃತ ಪಟ್ಟಿಯನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.
ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಮಾನ್ನಿಂದ ವೀಸಾ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಯುಎಇಗೆ ಮರಳುತ್ತಿದ್ದರು. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಲಸಿಗರಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಯುಎಇ ರಾಷ್ಟ್ರೀಯ ಆಂಬ್ಯುಲೆನ್ಸ್ ಸೇವೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಿದ್ದಾರೆ. ಗಾಯಗೊಂಡ 26 ಮಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ 14 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ರಾಸ್ ಅಲ್ ಖೈಮಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಸ್ ಚಾಲನೆಯಲ್ಲಿದ್ದಾಗ ಸಂಭವಿಸಿದ ಯಾಂತ್ರಿಕ ವೈಫಲ್ಯ ಹಾಗೂ ಅಪಘಾತಕ್ಕೆ ಕಾರಣವಾದ ಇತರ ಅಂಶಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಪಘಾತದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿರುವುದನ್ನು ದೃಢಪಡಿಸಿದೆ. ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ. ಸಂತ್ರಸ್ತರ ಕುರಿತು ಮಾಹಿತಿ ಪಡೆಯಲು ಹಾಗೂ ನೆರವು ಕೋರುವುದಕ್ಕಾಗಿ 24 ಗಂಟೆಗಳ ಸಹಾಯವಾಣಿ ಸಂಖ್ಯೆ 800 46342 ಅನ್ನು ಕೂಡ ಆರಂಭಿಸಲಾಗಿದೆ.

