ಡೈಲಿವಾರ್ತೆ: 25/ನ./2026

ಕೋಟೇಶ್ವರ ಕೊಡಿ ಹಬ್ಬದ ಜನಸಂದಣಿಯಲ್ಲಿ ಮಹಿಳೆಯ 7 ಪವನ್ ಚಿನ್ನದ ಕರಿಮಣಿ ಸರ ಕಳವು: ₹6 ಲಕ್ಷ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ ಖದೀಮರು!

ಕುಂದಾಪುರ: ಕೋಟೇಶ್ವರ ಕೊಡಿ ಹಬ್ಬದ ಪ್ರಯುಕ್ತ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಉಂಟಾಗಿದ್ದ ಜನಸಂದಣಿಯನ್ನೇ ದುರುಪಯೋಗಪಡಿಸಿಕೊಂಡ ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿರುವ ಘಟನೆ ನ.24ರಂದು ನಡೆದಿದೆ.

ಕುಂದಾಪುರ ತಾಲೂಕಿನ ಹುನ್ಸಮಕ್ಕಿ ಜಡ್ಡುಪಡಿಯ ನಿವಾಸಿ ಗೀತಾ ಬಿ. (51) ಅವರು ತಮ್ಮ ಪತಿಯೊಂದಿಗೆ ಔಷಧ ತರಲೆಂದು ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬೈಪಾಸ್‌ನಲ್ಲಿ ಬಸ್ಸಿನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.
ಮಧ್ಯಾಹ್ನ ಸುಮಾರು 11.30ಕ್ಕೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ ಬಳಿಕ, 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಈ ವೇಳೆ ಜನಜಂಗುಳಿಯ ನಡುವೆ ಯಾರೋ ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ಸುಮಾರು ₹6 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಗೀತಾ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.