



ಡೈಲಿವಾರ್ತೆ: 28/ನ./2026




ಬ್ರಹ್ಮಾವರ: ಉಡುಪಿ ಆಹಾರ ಉದ್ಯಮ ಮೇಳ ‘ದಶರುಚಿ-2026’ ಉದ್ಘಾಟನೆ:
ರಾಸಾಯನಿಕ ಬಳಕೆ ತಪ್ಪಿಸಿ, ಆರೋಗ್ಯಕರ ಆಹಾರ ತಯಾರಿಕೆಗೆ ಆದ್ಯತೆ ನೀಡಿ: ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ, ನ.28: ತ್ವರಿತ ಲಾಭದ ಉದ್ದೇಶದಿಂದ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಗ್ರಾಹಕರಿಗೆ ಶುಚಿ, ರುಚಿಕರ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳನ್ನು ಒದಗಿಸುವುದು ಆಹಾರ ಉದ್ಯಮದ ಪ್ರಮುಖ ಆದ್ಯತೆಯಾಗಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.) ಬ್ರಹ್ಮಾವರ ಮತ್ತು ದಶಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಉಡುಪಿ ಆಹಾರ ಉದ್ಯಮ ಮೇಳ ‘ದಶರುಚಿ-2026’ರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆ ತನ್ನ ವಿಶಿಷ್ಟ ಆಹಾರ ಪರಂಪರೆ, ಶುಚಿತ್ವ ಹಾಗೂ ರುಚಿಕರ ಖಾದ್ಯಗಳ ಮೂಲಕ ಹಿಂದಿನಿಂದಲೂ ದೇಶ-ವಿದೇಶಗಳಲ್ಲಿ ವಿಶಿಷ್ಟ ಖ್ಯಾತಿ ಗಳಿಸಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಆಹಾರ ಉದ್ಯಮಿಗಳ ಮೇಲಿದೆ. ಹೊಸದಾಗಿ ಉದ್ಯಮ ಆರಂಭಿಸಲು ಉತ್ಸುಕರಾಗಿರುವ ಯುವಕರಿಗೆ ಇಂತಹ ಮೇಳಗಳು ಉತ್ತಮ ಅವಕಾಶ ಹಾಗೂ ವೇದಿಕೆಯನ್ನು ಕಲ್ಪಿಸುತ್ತವೆ. ಉದ್ಯಮ ಮೇಳಗಳ ಮೂಲಕ ಹೊಸ ಉದ್ಯಮಗಳಿಗೆ ಉತ್ತೇಜನ ದೊರೆಯುವುದರ ಜತೆಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ಯುವಕರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಶಿಕ್ಷಣ, ಆಹಾರ ಉದ್ಯಮ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಮುಂದಿನ ಪೀಳಿಗೆಯ ಉದ್ಯಮಶೀಲತೆಯ ಬೆಳವಣಿಗೆಗೆ ಪೂರಕವಾಗಬೇಕು. ಯುವಕರು ಇಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಉದ್ಯಮಗಳಲ್ಲಿ ತೊಡಗಿಸಿಕೊಂಡರೆ ಉದ್ಯೋಗ ಸೃಷ್ಟಿಯ ಜತೆಗೆ ಆರ್ಥಿಕ ಅಭಿವೃದ್ಧಿಗೂ ವೇಗ ದೊರೆಯಲಿದೆ. ಅಲ್ಲದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚುವುದರಿಂದ ಯುವಕರು ತಮ್ಮ ಕುಟುಂಬದೊಂದಿಗೆ ನೆಲೆಸಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಉದ್ಯಮದ ಬೆಳವಣಿಗೆಗೆ ಸಂಘಟಿತ ಪ್ರಯತ್ನ ಹಾಗೂ ಪರಸ್ಪರ ಸಹಕಾರ ಅತ್ಯಗತ್ಯ. ಉದ್ಯಮಿಗಳು ಒಗ್ಗಟ್ಟಿನಿಂದ ಸವಾಲುಗಳನ್ನು ಎದುರಿಸಿ ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಬೇಕು. ಇದರೊಂದಿಗೆ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳನ್ನು ಒದಗಿಸುವ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಯಾರಕರ ಹಾಗೂ ಮಾರಾಟಗಾರರ ಸಂಘ ಮತ್ತು ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಹೆರಾಲ್ಡ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೃಷ್ಣಪ್ರಸಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ಆಲ್ವಿನ್ ಬೇಕರಿಯ ವಾಲ್ಟರ್ ಜೋಸೆಫ್ ಅವರಿಗೆ ‘ಆಹಾರೋದ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಉದ್ಯಮಿ ಪ್ರಸಾದ್ ಕಾಂಚನ್, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಕುಂದಾಪುರ ಉಪವಿಭಾಗದ ಅಂಕಿತ ಅಧಿಕಾರಿ ಮಹೇಶ್ ಪಿ.ಎಸ್., ಮಂಗಳೂರಿನ ಟೊಯೋಟೊ ಮಾರ್ಕೆಟಿಂಗ್ ಗ್ರೂಪ್ ಮುಖ್ಯಸ್ಥೆ ಸೋನಿಯಾ ಎಂ., ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಂ. ವಸಂತ ಕಿಣಿ, ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ನಟರಾಜ ಪ್ರಭು, ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆಯ ಗವರ್ನರ್ ರಾಜೀವ್ ಕೋಟ್ಯಾನ್, ಉದ್ಯಮಿಗಳಾದ ಸಂತೋಷ್ ವಾಗ್ಲೆ, ಸೀಮಾ ಎಚ್. ಬೆಳ್ಳೆ, ವಿನಯ್ ಕುಮಾರ್ ಕಬ್ಯಾಡಿ, ಸುಕುಮಾರ್ ಪಡುಬಿದ್ರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೇಶವ ಕುಂದರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ನಾಯರ್, ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಎಚ್. ಸುದರ್ಶನ್ ಹೆಗ್ಡೆ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ರೆ. ಫಾ. ಜಾನ್ ಫೆರ್ನಾಂಡಿಸ್, ಮುಫ್ತಿ ಮೊಹಮ್ಮದ್ ಸುಹೈಲ್, ಬ್ರಹ್ಮಾವರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜಿ. ಬಾಲಕೃಷ್ಣ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಘುಪತಿ ಬ್ರಹ್ಮಾವರ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ವಲಯ ಯೋಜನಾಧಿಕಾರಿ ರಮೇಶ್ ಪಿ.ಕೆ., ಬ್ರಹ್ಮಾವರ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಕಾರ್ಯದರ್ಶಿ ಅರವಿಂದ ದೇವಾಡಿಗ ಮತ್ತು ಬ್ರಹ್ಮಾವರ ಗೂಡ್ಸ್ ವಾಹನಗಳ ಸಂಘದ ಅಧ್ಯಕ್ಷ ರಮೇಶ್ ನಾಯ್ಕ್ ಭಾಗವಹಿಸಿದ್ದರು.
ಸಂಘದ ಗೌರವಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ, ಅಧ್ಯಕ್ಷ ವಿಶ್ವನಾಥ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಕಾನೂನು ಸಲಹೆಗಾರರು, ಗೌರವ ಸಲಹೆಗಾರ ಸ್ಟ್ಯಾನ್ಲಿ ಹೆರಾಲ್ಡ್ ಡಿಸೋಜಾ, ಉಪಾಧ್ಯಕ್ಷರಾದ ಸುದೇವ ಶೆಟ್ಟಿ ಹಾಗೂ ಕೆ.ಪಿ. ಶ್ರೀಶನ್, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಜೊತೆ ಕಾರ್ಯದರ್ಶಿಗಳಾದ ಗಣಪತಿ ಮರಕಾಲ ಹಾಗೂ ಕೃಷ್ಣ ಪೂಜಾರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉದ್ಯಮ ಮೇಳದ ಸಂಚಾಲಕ ಶ್ರೀಧರ್ ಪಿ.ಎಸ್. ಸ್ವಾಗತಿಸಿದರು. ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

