



ಡೈಲಿವಾರ್ತೆ: 28/ನ./2026




ತಿಂಡಿ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಚೆಂಡು ನುಂಗಿ ನಾಲ್ಕು ವರ್ಷದ ಬಾಲಕಿ ಸಾವು

ದಾವಣಗೆರೆ, ನ. 28: ತಿಂಡಿ ಪ್ಯಾಕೆಟ್ನೊಂದಿಗೆ ನೀಡಲಾಗಿದ್ದ ಸಣ್ಣ ಪ್ಲಾಸ್ಟಿಕ್ ಚೆಂಡನ್ನು ಆಕಸ್ಮಿಕವಾಗಿ ನುಂಗಿದ ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಆಲಿಯಾ ಶೇಖ್ (4) ಎಂದು ಗುರುತಿಸಲಾಗಿದೆ. ಚನ್ನಗಿರಿಯ ಕೌಸರ್ ಮಸೀದಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಮೂಲಗಳ ಪ್ರಕಾರ, ಬಾಲಕಿ 5 ರೂಪಾಯಿ ಬೆಲೆಯ ತಿಂಡಿ ಪ್ಯಾಕೆಟ್ ಖರೀದಿಸಿದ್ದು, ಅದರೊಂದಿಗೆ ಸಣ್ಣ ಪ್ಲಾಸ್ಟಿಕ್ ಚೆಂಡೊಂದನ್ನು ನೀಡಲಾಗಿತ್ತು. ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕೆ ಆಕಸ್ಮಿಕವಾಗಿ ಚೆಂಡನ್ನು ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ. ಅದು ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಕೂಡಲೇ ಕುಟುಂಬದವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಚಿಕಿತ್ಸೆ ನೀಡಿ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಈ ಘಟನೆ ಮಕ್ಕಳಿಗೆ ಮಾರಾಟ ಮಾಡುವ ತಿಂಡಿ ಉತ್ಪನ್ನಗಳ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಿಂಡಿ ಪ್ಯಾಕೆಟ್ಗಳೊಂದಿಗೆ ಸಣ್ಣ ಆಟಿಕೆಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ನೀಡುವ ಪದ್ಧತಿ ಚಿಕ್ಕ ಮಕ್ಕಳ ಪಾಲಿಗೆ ಅಪಾಯಕಾರಿಯಾಗುವ ಸಾಧ್ಯತೆಯಿದ್ದು, ಇಂತಹ ಉತ್ಪನ್ನಗಳ ಮಾರಾಟ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

