



ಡೈಲಿವಾರ್ತೆ: 28/ನ./2026




ಸಿದ್ದಾಪುರದಲ್ಲಿ ವ್ಯವಹಾರಿಕ ಜ್ಞಾನಕ್ಕೆ ವಿದ್ಯಾರ್ಥಿಗಳ ವೇದಿಕೆ: ನ.30ರಂದು ಜ್ಞಾನಸರಸ್ವತಿಯಲ್ಲಿ ‘ಬಿಝ್ ಕಾರ್ನಿವಾಲ್ 2026’

ಸಿದ್ಧಾಪುರ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ, ಉದ್ಯಮಶೀಲತಾ ಮನೋಭಾವ ಹಾಗೂ ವ್ಯಾಪಾರ ನಿರ್ವಹಣೆಯ ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಸುಮುಖ ಎಜ್ಯುಕೇಷನಲ್ ಟ್ರಸ್ಟ್ (ರಿ.) ಸಿದ್ಧಾಪುರ ಇದರ ಆಶ್ರಯದಲ್ಲಿ ನ.30ರಂದು ಜ್ಞಾನಸರಸ್ವತಿ ಪಿಯು ಕಾಲೇಜಿನ ಆವರಣದಲ್ಲಿ ‘ಬಿಝ್ ಕಾರ್ನಿವಾಲ್ 2026’ ಎಂಬ ವಿಶೇಷ ವ್ಯವಹಾರ ಮೇಳ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 8.30ರಿಂದ ಸಂಜೆವರೆಗೆ ನಡೆಯಲಿರುವ ಈ ಮೇಳದಲ್ಲಿ ಜ್ಞಾನಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸ್ವತಃ ವಿವಿಧ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸಲಿದ್ದಾರೆ. ಸುಮಾರು 35ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ವ್ಯಾಪಾರದ ವಿವಿಧ ಆಯಾಮಗಳನ್ನು ನೇರವಾಗಿ ಅರಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪಠ್ಯಾಧಾರಿತ ಶಿಕ್ಷಣದ ಜತೆಗೆ ದೈನಂದಿನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುವ ವ್ಯಾಪಾರ, ಖರೀದಿ, ಮಾರಾಟ ಹಾಗೂ ವ್ಯವಹಾರ ನಿರ್ವಹಣೆಯ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ. ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ, ಆರ್ಥಿಕ ವ್ಯವಹಾರಗಳ ತಿಳುವಳಿಕೆ ಹಾಗೂ ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮೇಳವನ್ನು ರೂಪಿಸಲಾಗಿದೆ.
‘ಬಿಝ್ ಕಾರ್ನಿವಾಲ್ 2026’ಕ್ಕೆ ವಂಡಾರಿನ ಶ್ರೀಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಶೆಟ್ಟಿ ಚಾಲನೆ ನೀಡಲಿದ್ದು, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಹಾಗೂ ಸೃಷ್ಟಿ ಇನ್ಫೋಟೆಕ್ನ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹರ್ಷವರ್ಧನ ಶೆಟ್ಟಿ ಮೇಳವನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳೂ ನಡೆಯಲಿದ್ದು, ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿವೆ. ಒಂದೇ ವೇದಿಕೆಯಲ್ಲಿ ವ್ಯವಹಾರಿಕ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.

