ಡೈಲಿ ವಾರ್ತೆ : 31 ಮೇ 2022

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ರಾತ್ರಿ ಸುಮಾರು ಅರ್ಧ ಗಂಟೆ ಕಾಲ 100 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಲವಾದ ಗಾಳಿ ಜನಜೀವನ ಅಸ್ತವ್ಯಸ್ತಗೊಳಿಸಿತು. ಗಾಳಿ ಅನಾಹುತಗಳಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಹಸಿರು ಹೊದಿಕೆಯ ಮರಗಳು ಬೆಂಕಿಪೊಟ್ಟಣಗಳಂತೆ ಚಲ್ಲಾಪಿಲ್ಲಿಯಾಗಿ ಬಿದ್ದು, ಆ ಜಾಗದಲ್ಲಿ ಹಾದು ಹೋಗುತ್ತಿದ್ದ ವಾಹನಗಳನ್ನು ನಜ್ಜುಗುಜ್ಜಾಗಿಸಿದವು. ಹೋರ್ಡಿಂಗ್ ಮತ್ತು ನಿರ್ಮಾಣ ಸ್ಥಳಗಳಲ್ಲಿದ್ದ ಕಬ್ಬಿಣ ಹಾಗೂ ಟಿನ್ ಶೀಟ್‌ಗಳು ಗಾಳಿಯಲ್ಲಿ ತರಗೆಲೆಗಳಂತೆ ಹಾರಿ ವಾಹನಗಳ ಮೇಲೆ ಬಿದ್ದವು. ಈ ಅನಿರೀಕ್ಷಿತ ಆಘಾತದಿಂದ ಪ್ರಯಾಣಿಕರು ಕಂಗಾಲಾದರು. ಜಾಮಾ ಮಸೀದಿ ಪ್ರದೇಶದಲ್ಲಿ ಮನೆಯ ಎರಡನೇ ಮಹಡಿಯ ಬಾಲ್ಕನಿ ಕುಸಿದು ಬಿದ್ದ ದುರಂತದಲ್ಲಿ 50 ವರ್ಷದ ಕೈಲಾಶ್ ಎಂಬವರು ಮೃತಪಟ್ಟಿದ್ದಾರೆ. ಕೆಂಪುಕೋಟೆ ಸಮೀಪದ ಅಂಗೂರಿ ಬಾಗ್‌ನಲ್ಲಿ ಮರದಡಿ ಸಿಲುಕಿ ಬಶೀರ್ ಬಾಬಾ ಎಂಬ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.

ಹೊಸದಿಲ್ಲಿ ಮತ್ತು ಕೇಂದ್ರ ದೆಹಲಿ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಕನಿಷ್ಠ 85 ಮರಗಳು ಬುಡಮೇಲಾಗಿದ್ದು, 40ಕ್ಕೂ ಅಧಿಕ ಕಡೆಗಳಲ್ಲಿ ಮರದ ಟೊಂಗೆಗಳು ಮುರಿದು ಬಿದ್ದಿವೆ ಎಂದು ಲೋಕೋಪಯೋಗಿ ಇಲಾಖೆಯ ತೋಟಗಾರಿಕೆ ವಿಭಾಗ ಹೇಳಿದೆ.

ಮಹಾನಗರ ಪಾಲಿಕೆ ಇಂಥ 84 ಘಟನೆಗಳನ್ನು ವರದಿ ಮಾಡಿದೆ. ಇದರೊಂದಿಗೆ ಒಟ್ಟು 170 ಮರಗಳು ಮುರಿದು ಬಿದ್ದಂತಾಗಿವೆ. ಇದಕ್ಕೂ ಹೆಚ್ಚು ಘಟನೆಗಳು ಸಂಭವಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಮಾಣದ ಬಿರುಸಾದ ಗಾಳಿಯ ಸಾಧ್ಯತೆ ಬಗ್ಗೆ ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರಲಿಲ್ಲ. ಗುರುಗಾಂವ್ ಮತ್ತು ಪಶ್ಚಿಮ ದೆಹಲಿ ಪ್ರದೇಶದಲ್ಲಿ ಬಲವಾದ ಗಾಳಿ ರೂಪುಗೊಂಡ ಸಂದರ್ಭದಲ್ಲಿ ಕೇವಲ 30 ನಿಮಿಷ ಮುಂಚಿತವಾಗಿ ಎಚ್ಚರಿಕೆ ನೀಡಲಾಯಿತು. ಸಂಜೆಯ ಸುಮಾರಿಗೆ ಗಾಳಿ ಗರಿಷ್ಠ ರಭಸ ಪಡೆದು ಅನಾಹುತಗಳ ಸರಣಿ ಸೃಷ್ಟಿಸಿತು.

“ಮುಂಗಾರು ಪೂರ್ವ ಪರಿಸ್ಥಿತಿಯಲ್ಲಿ ಇಂಥ ಗಾಳಿ ಸಹಿತ ಮಳೆ ಮೂರು, ನಾಲ್ಕು ವರ್ಷಗಳಿಗೊಮ್ಮೆ ಆಗುತ್ತದೆ. ಕಳೆದ ಬಾರಿ ಅಂದರೆ 2018ರ ಮೇ 13ರಂದು 103 ಕಿಲೋಮೀಟರ್ ವೇಗದ ಗಾಳಿ ಬೀಸಿತ್ತು ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್.ಕೆ.ಜೇನಮರಿ ಹೇಳಿದ್ದಾರೆ.