ಡೈಲಿ ವಾರ್ತೆ : 01 ಜೂನ್ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಹೊನ್ನಾವರ: ಪಟ್ಟಣದ ಬಹುತೇಕ ರಸ್ತೆಗಳು ಹೊಂಡಮಯವಾಗಿದ್ದು, ಜನಪ್ರತಿನಿಧಿಗಳ, ಅಧಿಕಾರಿಗಳ ವರ್ತನೆಯ ವಿರುದ್ಧ ಪಟ್ಟಣ ನಿವಾಸಿಗಳ ಜೊತೆ ಗ್ರಾಮೀಣ ಭಾಗದವರು ಸಂಚಾರ ನಡೆಸುವಾಗ ಹಿಡಿಶಾಪ ಹಾಕುತ್ತಿದ್ದಾರೆ.

20 ವಾರ್ಡ್ಗಳನ್ನು ಹೊಂದಿರುವ ಪಟ್ಟಣದ ಬಹುತೇಕ ಎಲ್ಲಾ ವಾರ್ಡಗಳನ್ನು ರಸ್ತೆ ಮತ್ತು ಚರಂಡಿ ಸಮಸ್ಯೆ ಹೇಳತೀರದಾಗಿದೆ. ಬೆರಳಣಿಕೆಯಷ್ಟು ಕಡೆ ರಸ್ತೆ ಸುಸ್ಥಿತಿ ಹೊಂದಿದ್ದು, ಹಲವಡೆ ಹೊಂಡಮಯವಾದರೆ, ಇನ್ನು ಕೆಲವಡೆ ರಸ್ತೆ ಯಾವುದು ಚರಂಡಿ ಯಾವುದು ಎಂದು ಗೊಂದಲ ಉಂಟುಮಾಡುವಂತಿದೆ. ಕಳೆದ ಐದಾರು ವರ್ಷದಿಂದ ಒಳಚರಂಡಿ ಅವಾಂತರ, ಇತ್ತೀಚಿನ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ ಎಂದು ರಸ್ತೆ ಮಧ್ಯೆಯೆ ಹೊಂಡ ತೆಗೆದು ಅರೆಬರಿ ದುರಸ್ತಿ ಮಾಡಿರುದರ ಪರಿಣಾಮದಿಂದ ರಸ್ತೆ ಹೊಂಡ ಬಿದ್ದು ಹರಸಾಹಸದ ಮೂಲಕ ಪ್ರಯಾಣಿಸುವ ಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ.

ಪಟ್ಟಣದ ರಜತಗಿರಿ, ಪ್ರಭಾತನಗರ, ಗಾಂಧಿನಗರ, ಫಾರೆಸ್ಟ ಕಾಲೋನಿ, ತುಳಸಿನಗರ, ರಾಯಲಕೇರಿ, ದುರ್ಗಾಕೇರಿ, ರಾಮತೀರ್ಥ, ಕಿಂತಾಲಕೇರಿ, ಕಮಟೇಹಿತ್ತಲ್, ಬಸ್ ನಿಲ್ದಾಣ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹೊಂಡಮಯವಾಗಿದೆ. ಕಳೆದ ಹಲವು ವರ್ಷದಿಂದ ದುರಸ್ತಿ ಕಾಣದೇ ಇರುದರಿಂದ ಈ ಭಾಗದ ನಿವಾಸಿಗಳು ಧೂಳಿನಿಂದ ಮನೆಯಲ್ಲಿಯೂ ನೆಮ್ಮದಿಯಿಂದ ಇರುವುದು ಅಸಾಧ್ಯವಾಗಿ ಮಾರ್ಪಟ್ಟಿದೆ. ಕುಮಟಾ- ಹೊನ್ನಾವರ ಕ್ಷೇತ್ರಕ್ಕೆ ಈ ಪಟ್ಟಣ ಸೇರಿರುವುದರಿಂದ ಶಾಸಕ ದಿನಕರ ಶೆಟ್ಟಿ ಅವರಿಗೆ ಕುಮಟಾ ಜೊತೆಗೆ ಹೊನ್ನಾವರವು ಅಭಿವೃದ್ಧಿಗೆ ಅನುದಾನ ಬರಲಿದೆ. ಕುಮಟಾಕ್ಕೆ ಕೋಟಿಗಟ್ಟಲೇ ಅನುದಾನ ಬಂದು ರಸ್ತೆ ಹಾಗೂ ಚರಂಡಿ ನಿರ್ಮಾಣವಾದರೂ, ಹೊನ್ನಾವರಕ್ಕೆ ಮಾತ್ರ ಈ ಭಾಗ್ಯ ಇದುವರೆಗೂ ಬಂದಿಲ್ಲ. ಕೋಟಿ ಅನುದಾನದ ರಸ್ತೆ ಮಂಜೂರಾಗಲಿದೆ ಎಂದು ಕಳೆದ ನಾಲ್ಕು ವರ್ಷದಿಂದ ಹೇಳುತ್ತಾ ಬಂದಿದ್ದು, ಇದುವರೆಗೂ ಮಂಜೂರಾಗಿದೇ ಭರವಸೆಯಾಗಿಯೇ ಉಳಿದಿದೆ.


ಪಟ್ಟಣಕ್ಕೆ ಪ್ರತಿನಿತ್ಯ ಗ್ರಾಮೀಣ ಭಾಗಗಳಿಂದ ಸಾವಿರಾರು ಪ್ರಯಾಣಿಕರು ಸಂಚರಿಸುವಾಗ ಹೊಂಡದ ಯಾತನೆ ಅನುಭವಿಸಿಯೇ ಸಂಚರಿಸಬೇಕಿದೆ. ಆಗೊಮ್ಮೆ ಈಗೊಮ್ಮೆ ಇದೇ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸಿದರೂ ಇವರ ಎಸಿ ಕಾರಿನ ಪ್ರಯಾಣಕ್ಕೆ ಇದು ಗೊಚರಿಸಲ್ಲವೋ ಅಥವಾ ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಸಂಚರಿಸುವಂತೆ ಕಾಣುತ್ತಿದೆ.

ಕಳೆದ ಎರಡು ವರ್ಷದ ಹಿಂದೆ ಸಚೀವರ ಎದುರಗಡೆ ಪಟ್ಟಣದ ರಸ್ತೆ ಚುನಾವಣೆಗೆ 6 ತಿಂಗಳು ಇರುವಾಗ ಮಾಡುತ್ತೇನೆ ಇಲ್ಲದೇ ಹೋದರೆ ಜನರು ಮರೆಯುತ್ತಾರೆ ಎಂದು ಈ ಹೇಳಿಕೆ ನೀಡಿದ ಶಾಸಕರು ಇನ್ನು ಚುನಾವಣೆಗೆ ಎಂಟು ತಿಂಗಳಷ್ಟೆ ಇದೆ. ಈಗಲೇ ರಸ್ತೆ ಮಾಡಿಸಲು ಮುಂದಾಗಿ ಇಲ್ಲದೇ ಹೋದರೆ ಪಟ್ಟಣ ಅಲ್ಲದೇ ಗ್ರಾಮೀಣ ಭಾಗದ ಸಾರ್ವಜನಿಕರು ಮುಂದಿನ ಚುನಾವಣೆಯಲ್ಲಿ ಸಂಪೂರ್ಣವಾಗಿ ನಿಮ್ಮನ್ನು ಮರೆಯಬಹುದು.—· ಶ್ರೀನಿವಾಸ, ಸ್ಥಳೀಯ ನಿವಾಸಿ

ಸರ್, ಕೈ ಮುಗಿಯುತ್ತೇವೆ. ಒಂದೆಡೆ ಜನರಿಂದ ಇದೇ ವಿಷಯಕ್ಕೆ ಹೇಳಿಸಿಕೊಂಡು ಮುಖ ತೋರಿಸೋಕೆ ಆಗದೇ ಓಡಾಟ ಮಾಡುತ್ತಿದ್ದೇವೆ. ನಮ್ಮನ್ನ ಟಾರ್ಗೆಟ್ ಮಾಡಿ ಅನುದಾನ ಕೊಡಲ್ಲ. ರಸ್ತೆಯಲ್ಲಿ ಓಡಾಟ ಮಾಡೋಕೆ ಆಗಲ್ಲ ಎಂದು ಅಸಾಹಕತೆಯನ್ನು ಹೊರಹಾಕಿದರು.

· ಹೆಸರು ಹೇಳಲು ಇಚ್ಛಿಸದ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರು

ನೆರೆಯ ಕುಮಟಾಕ್ಕೆ ರಸ್ತೆ ಮಾಡಿಸಿ ಹೊನ್ನಾವರಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಶಾಸಕರು ಹೊನ್ನಾವರಕ್ಕೆ ಅನುದಾನವೇ ನೀಡುತ್ತಿಲ್ಲ. ಕೇವಲ ಭಾಷಣ ಮಾಡಿ ಅಭಿವೃದ್ದಿಯ ಭರವಸೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೋಟಿಗಟ್ಟಲೆ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡುವ ಶಾಸಕರು ಒಮ್ಮೆ ಪಟ್ಟಣದಲ್ಲಿ ಸಂಚಾರ ನಡೆಸಿ ಇಲ್ಲಿಯ ಸಮಸ್ಯೆ ಆಲಿಸಲಿ.

· ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ಜೆಡಿಎಸ್ ಬೆಂಬಲಿತ ಪ.ಪಂ. ಸದಸ್ಯ