ಡೈಲಿ ವಾರ್ತೆ: 29 ಡಿಸೆಂಬರ್ 2022

ಜ. 1 ರಂದು ಮೊಡಂಕಾಪು ಇನ್ಫೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ “ಹಿರಿಯ ವಿದ್ಯಾರ್ಥಿಗಳ ಸಮಾಗಮ” ಕಾರ್ಯಕ್ರಮ.!

ಬಂಟ್ವಾಳ, ಡಿ.29: ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ “ಹಿರಿಯ ವಿದ್ಯಾರ್ಥಿಗಳ ಸಮಾಗಮ” ಕಾರ್ಯಕ್ರಮ ಜ. 01 ಆದಿತ್ಯವಾರ ಸಂಜೆ 4.00 ಗಂಟೆಗೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸದಾಶಿವ ಬಂಗೇರ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ‌ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಶಾಲೆಯ ಹಿರಿಯ ವಿದ್ಯಾರ್ಥಿ, ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಕಾರ್ಯಕ್ರಮವನ್ನು‌ ಉದ್ಘಾಟಿಸಲಿದ್ದಾರೆ.

ಮೊಡಂಕಾಪು ವಿದ್ಯಾಸಂಸ್ಥೆಯ ಸಂಚಾಲಕರಾದ ಸ್ವಾಮಿ ವಲೇರಿಯನ್‌ ಡಿ’ಸೋಜ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ ಎಂದರು.

ಶಿಕ್ಷಣ ಪ್ರೇಮಿ, ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ, ಬೆಳಗಾವಿ ವಿಭಾಗದ ಕ.ಪ್ರಾ.ಶಿ.ಪ.ಮಂ.ನ ಸಹ ನಿರ್ದೇಶಕ ವಾಲ್ಟರ್ ಡಿ’ಮೆಲ್ಲೊ, ಎಸ್.ಕೆ.ಎಸ್.ಎಸ್.ಎಫ್ ಬಂಟ್ವಾಳ ವಲಯದ ಅಧ್ಯಕ್ಷ ಇರ್ಷಾದ್ ಹುಸೈನ್‌ ದಾರಿಮಿ ಅಲ್ ಜಝರಿ ಮಿತ್ತಬೈಲ್, ಬಂಟ್ವಾಳ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಮೊಡಂಕಾಪು ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ರೋಶನ್‌ ಡಿ’ಸೋಜ, ಶಾಲಾ ಮುಖ್ಯ ಶಿಕ್ಷಕಿ ಟೀಜಾ ಡಿ’ಮೆಲ್ಲೊ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಈ ವಿದ್ಯಾಸಂಸ್ಥೆಗೆ ಸುಮಾರು 320 ವರ್ಷಗಳ ಇತಿಹಾಸವಿದ್ದು, 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ಹೊರ ತೆರಳಿರುವ ಹೆಗ್ಗಳಿಕೆಯನ್ನು ಹೊಂದಿದೆ. ಇಂದಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿರುವುದು ಪರಿಸರದಲ್ಲಿ ಜನಮನ್ನಣೆ ಪಡೆದ ಸಂಸ್ಥೆಯಾಗಿದೆ ಎಂದರು.

ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದದ ಮಾರ್ಗದರ್ಶನದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಗಿದೆ ಎಂದು ಹೇಳಿದ ಅವರು ಈ ಶಾಲೆಯ ಹಳೇ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಸ್ವೀಕರಿಸಿ ಸಂಘದ ಬಲವರ್ಧನೆಗೆ ಸಹಕರಿಸುವಂತೆ ಕೋರಿದರು.

ಸಂಘದ ಪದಾಧಿಕಾರಿಗಳಾದ ಕಾಮಿಲ್ ಟಿ.ಡಿಕುನ್ಹಾ , ರಶ್ಮೀ, ಸಚಿನ್ ನೊರೊನ್ಹಾ, ಶಾಲಾ ಶಿಕ್ಷಕ ಸುನೀಲ್ ಲುವಿಸ್ ಉಪಸ್ಥಿತರಿದ್ದರು.