ಡೈಲಿ ವಾರ್ತೆ:19 ಜನವರಿ 2023

ಅಪ್ಪ-ಅಮ್ಮ, ಅಜ್ಜಿ ಇಲ್ಲ ಅಂತಾ ಮನನೊಂದು ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು

ತುಮಕೂರು: ಮೂವರು ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಸೋದರಿಯರನ್ನು ರಂಜಿತಾ(24), ಬಿಂದು(21), ಚಂದನಾ(18) ಎಂದು ಗುರುತಿಸಲಾಗಿದೆ.

ಕಳೆದ 9 ದಿನಗಳ ಹಿಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ವಾಸನೆ ಬಂದ ಬಳಿಕ ಪ್ರಕರಣ ಇಂದು(ಜನವರಿ 19) ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಹಲವು ವರ್ಷಗಳ ಹಿಂದೆಯೇ ತಂದೆ-ತಾಯಿ ಮೃತಪಟ್ಟಿದ್ದರು. ತಂದೆ-ತಂದೆಯನ್ನು ಕಳೆದುಕೊಂಡ ಅನಾಥರಾಗಿದ್ದ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದ್ರೆ, ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ಮರಣ ಹೊಂದಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಈ ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.