ಡೈಲಿ ವಾರ್ತೆ:20 ಜನವರಿ 2023
ಪೊಲೀಸ್ ದೌರ್ಜನ್ಯ: ಬೆಳ್ತಂಗಡಿ ವಕೀಲ ಕುಲದೀಪ್’ಗೆ 3 ಲಕ್ಷ ರೂ. ಪರಿಹಾರ ಪಾವತಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಕೀಲ ಕುಲದೀಪ್ ಅವರಿಗೆ 3 ಲಕ್ಷ ರೂ.ಪರಿಹಾರ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ದಂಡದ ಹಣವನ್ನು ತಪ್ಪಿತಸ್ಥ ಪೊಲೀಸರಿಂದ ವಸೂಲಿ ಮಾಡುವಂತೆ ನ್ಯಾಯಾಲಯವು ನಿರ್ದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯ ಸಬ್ ಇನ್’ಸ್ಪೆಕ್ಟರ್ ಕೆ ಪಿ ಸುತೇಶ್ ಅವರು ತಮ್ಮ ಮೇಲೆ ಕಾನೂನುಬಾಹಿರವಾಗಿ ಹಲ್ಲೆ ನಡೆಸಿರುವುದನ್ನು ಪ್ರಶ್ನಿಸಿ ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
“ವಕೀಲ ಕುಲದೀಪ್ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಈ ಕುರಿತಾದ ವರದಿಯನ್ನು ಒಂದು ತಿಂಗಳ ಒಳಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕುಲದೀಪ್ ಮೇಲಿನ ದೌರ್ಜನ್ಯದ ಕುರಿತು ಪುಂಜಾಲಕಟ್ಟೆಯ ಠಾಣೆಯಲ್ಲಿ ಪಿಎಸ್’ಐ ಸುತೇಶ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ವಿಸ್ತೃತವಾದ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಅರ್ಜಿದಾರ ಕುಲದೀಪ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ವಕೀಲರೊಬ್ಬರ ಮೇಲಿನ ಹಲ್ಲೆಯನ್ನು ಪರಿಗಣಿಸಿ ಪರಿಹಾರ ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಾಡಿದ ಪ್ರಥಮ ಆದೇಶ ಇದಾಗಿದೆ. ಪ್ರಕರಣದ ನ್ಯಾಯಾಲಯದ ಮೆಟ್ಟಿಲೇರಿದ ಒಂದು ತಿಂಗಳಲ್ಲಿ ಇತ್ಯರ್ಥವಾಗಿರುವ ನಿಟ್ಟಿನಲ್ಲಿಯೂ ಇದು ಐತಿಹಾಸಿಕ ಕ್ರಮವಾಗಿದೆ” ಎಂದು “ಬಾರ್ ಅಂಡ್ ಬೆಂಚ್”ಗೆ ಮಾಹಿತಿ ನೀಡಿದರು.
ಜನವರಿ 10ರಂದು ನ್ಯಾಯಾಲಯವು “ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನವು ಕಾಗದಕ್ಕೆ ಸೀಮಿತವಾಗಿದೆ. ಮುಂದೆ ಇಂಥ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು” ಎಂದು ಪೊಲೀಸರಿಗೆ ಮೌಖಿಕವಾಗಿ ಕಟು ಎಚ್ಚರಿಕೆ ನೀಡಿತ್ತು.
“ವಕೀಲ ಕುಲದೀಪ್ ಅವರಿಗೆ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೊಲೀಸರಿಂದ ವಸೂಲಿ ಮಾಡಬೇಕು. ಕುಲದೀಪ್ ಅವರು ವಕೀಲರ ಸಂಘದಲ್ಲಿ ನೋಂದಣಿ ಮಾಡಿ 20 ದಿನಗಳಾಗಿಲ್ಲ. ಅದಾಗಲೇ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ” ಎಂದು ಪೀಠವು ಬೇಸರ ವ್ಯಕ್ತಪಡಿಸಿತ್ತು.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಜನವರಿ 5ರಂದು ಪಿಎಸ್’ಐ ಸುತೇಶ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 504, 506, 323, 324 ಜೊತೆಗೆ 34 ಅಡಿ ಎಫ್’ಐಆರ್ ದಾಖಲಿಸಲಾಗಿತ್ತು.