ಡೈಲಿ ವಾರ್ತೆ: ಮಾ./07/2026

25 ಅಡಿ ಆಳಕ್ಕೆ ಬಿದ್ದ ವಾಕಿಂಗ್ ಹೋದ ಮಹಿಳೆ – ಗುಂಡಿಯಲ್ಲಿ 8 ಗಂಟೆಗಳ ಕಾಲ ಸಾವು-ಬದುಕಿನ ಹೋರಾಟ!

​ಬೆಂಗಳೂರು: ಸಿಲಿಕಾನ್ ಸಿಟಿಯ ನಾಗರಭಾವಿ ಸರ್ಕಲ್ ಬಳಿ ಅಂಡರ್‌ಪಾಸ್ ಕಾಮಗಾರಿಯ ನಿರ್ಲಕ್ಷ್ಯಕ್ಕೆ ಅಮಾಯಕ ಮಹಿಳೆಯೊಬ್ಬರು ಬಲಿಯಾಗುವ ಹಂತಕ್ಕೆ ತಲುಪಿದ ಆಘಾತಕಾರಿ ಘಟನೆ ನಡೆದಿದೆ.

25 ಅಡಿ ಆಳದ ಗುಂಡಿಗೆ ಬಿದ್ದ ಪರಿಮಳ (56) ಎಂಬವರು ಸುಮಾರು 8 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ, ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಮಧ್ಯಾಹ್ನದ ಸಮಯದಲ್ಲಿ ವಾಕಿಂಗ್‌ಗೆಂದು ಹೊರಬಂದಿದ್ದ ಪರಿಮಳ ಅವರು, ಅಂಡರ್‌ಪಾಸ್‌ ಕಾಮಗಾರಿಗಾಗಿ ಜಿಬಿಎ (GBA) ತೋಡಿದ್ದ ಆಳವಾದ ಗುಂಡಿಗೆ ಅಕಸ್ಮಾತ್ತಾಗಿ ಬಿದ್ದಿದ್ದಾರೆ. ಗುಂಡಿಯ ಆಳ ಹಾಗೂ ಬಿದ್ದ ರಭಸಕ್ಕೆ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಸಂಜೆಯಾದರೂ ತಾಯಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಪುತ್ರ ಸುಮಂತ್, ತಕ್ಷಣವೇ ‘112’ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
​ಲೊಕೇಶನ್ ಟ್ರೇಸ್ ಮಾಡಿ ರಕ್ಷಣೆ ರಾತ್ರಿಯವರೆಗೂ ಮಹಿಳೆಯ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮಧ್ಯರಾತ್ರಿಯ ಸುಮಾರಿಗೆ ಫೋನ್ ಕನೆಕ್ಟ್ ಆದಾಗ, ತಾಯಿ ಅಸ್ಪಷ್ಟ ಧ್ವನಿಯಲ್ಲಿ ತಾನು ಮೋರಿಯೊಂದರಲ್ಲಿ ಬಿದ್ದಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ತಕ್ಷಣವೇ ಫೋನ್ ಲೊಕೇಶನ್ ಟ್ರೇಸ್ ಮಾಡಿ ಕಾರ್ಯಾಚರಣೆ ನಡೆಸಿದಾಗ, ನಾಗರಭಾವಿ ಸರ್ಕಲ್ ಬಳಿಯ ಕಾಮಗಾರಿ ಗುಂಡಿಯಲ್ಲಿ ಅವರು ಪತ್ತೆಯಾಗಿದ್ದಾರೆ.
ಬಳಿಕ ಹಗ್ಗದ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ.

​ಘಟನೆಯಲ್ಲಿ ಪರಿಮಳ ಅವರ ಪಕ್ಕೆಲುಬು, ಬೆನ್ನು ಹಾಗೂ ತಲೆಗೆ ತೀವ್ರ ಗಾಯಗಳಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪುತ್ರ ಸುಮಂತ್:
​”ಅಲ್ಲಿ ಯಾವುದೇ ಸೈನ್‌ಬೋರ್ಡ್ ಅಥವಾ ಬ್ಯಾರಿಕೇಡ್‌ಗಳನ್ನು ಹಾಕಿರಲಿಲ್ಲ. ಜಿಬಿಎ ಅಧಿಕಾರಿಗಳ ಇಂತಹ ಬೇಜವಾಬ್ದಾರಿತನವೇ ಅಮ್ಮನ ಈ ಸ್ಥಿತಿಗೆ ಕಾರಣ. ರಾತ್ರಿ ಗಸ್ತು ಪೊಲೀಸರ ಸಹಾಯದಿಂದ ಅಮ್ಮ ಬದುಕುಳಿದಿದ್ದಾರೆ,” ಎಂದು ಕಣ್ಣೀರಿಟ್ಟಿದ್ದಾರೆ.

​ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಕಾಮಗಾರಿಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.