

ಡೈಲಿ ವಾರ್ತೆ: ಮಾ./07/2026

ಹನಿಟ್ರ್ಯಾಪ್ ಜಾಲ ಬೀಸಿ ಉದ್ಯಮಿಯಿಂದ ಲಕ್ಷಾಂತರ ರೂ. ಬೇಡಿಕೆ – ನರ್ಸ್ ಸೇರಿ ನಾಲ್ವರು ಆರೋಪಿಗಳ ಬಂಧನ

ದಾವಣಗೆರೆ: ನಗರದ ಹಿರಿಯ ಉದ್ಯಮಿಯೊಬ್ಬರನ್ನು ನಂಬಿಸಿ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಭೀಕರ ಹನಿಟ್ರ್ಯಾಪ್ ಜಾಲವನ್ನು ವಿದ್ಯಾನಗರ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನರ್ಸ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಮತ್ತು ಚನ್ನಬಸಪ್ಪ ಬಂಧಿತ ಆರೋಪಿಗಳು. ಈ ಪೈಕಿ ಬಂಧಿತನೊಬ್ಬ ಈ ಹಿಂದೆಯೂ ನಾಲ್ಕಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಪರಿಚಯವೇ ಸಂಚಾಯಿತು:
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿ ಸುಷ್ಮಿತಾ, 66 ವರ್ಷದ ಉದ್ಯಮಿಯೊಬ್ಬರಿಗೆ ಪರಿಚಯವಾಗಿದ್ದಳು. ತಾನು ಸಂಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಉದ್ಯಮಿಯ ಸಾಂತ್ವನ ಗಳಿಸಿದ್ದ ಈಕೆ, ನಂತರ ಸ್ನೇಹ ಬೆಳೆಸಿದ್ದಳು. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು ಉದ್ಯಮಿಯ ವಿರುದ್ಧ ವ್ಯವಸ್ಥಿತ ಒಳಸಂಚು ರೂಪಿಸಿದ್ದರು.
ಸಿದ್ದವೀರಪ್ಪ ಬಡಾವಣೆಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದಕ್ಕೆ ಉದ್ಯಮಿ ಬಂದಿದ್ದ ಸಂದರ್ಭವನ್ನು ಸಂಚುಕೋರರು ಬಳಸಿಕೊಂಡಿದ್ದಾರೆ. ಅಲ್ಲಿಗೆ ನುಗ್ಗಿದ ತಂಡವು ಉದ್ಯಮಿಯ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಪ್ರಕರಣ ಮುಚ್ಚಿಹಾಕಲು 25 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಬೆದರಿಕೆಗೆ ಮಣಿದ ಉದ್ಯಮಿ 12 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಆರೋಪಿಗಳು ಪದೇ ಪದೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಅಂತಿಮವಾಗಿ 1 ಲಕ್ಷ ರೂಪಾಯಿ ಹಣದೊಂದಿಗೆ ಆಂಜನೇಯ ಬಡಾವಣೆ ಬಳಿ ಬರಲು ಸೂಚಿಸಿದ ಆರೋಪಿಗಳು, ಅಲ್ಲಿ ಉದ್ಯಮಿಯಿಂದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಇದರಿಂದ ನೊಂದ ಉದ್ಯಮಿ ವಿದ್ಯಾನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಪ್ರಕರಣದ ಗಂಭೀರತೆ ಅರಿತ ಎಸ್‌ಪಿ ಶೇಖರ್ ಹೆಚ್. ತೆಕ್ಕಣ್ಣನವರ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ 1 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
”ಇದು ಮೇಲ್ನೋಟಕ್ಕೆ ವ್ಯವಸ್ಥಿತ ಹನಿಟ್ರ್ಯಾಪ್ ಆಗಿದ್ದು, ತನಿಖೆ ಮುಂದುವರಿದಿದೆ. ಬಂಧಿತರ ಪೈಕಿ ಒಬ್ಬನ ಮೇಲೆ ಈಗಾಗಲೇ ಹಲವು ಪ್ರಕರಣಗಳಿವೆ,” ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.