ಡೈಲಿ ವಾರ್ತೆ: ಮಾ./07/2026

ಬ್ರಹ್ಮಾವರ: ನಾಗಮಂಡಲ ಸೇವೆಗೆ ಹೋಗಿದ್ದ ದಂಪತಿ ಮನೆಗೆ ಕನ್ನ; 14.67 ಲಕ್ಷ ಮೌಲ್ಯದ ಸೊತ್ತು ಕಳವು

​ಬ್ರಹ್ಮಾವರ: ಮನೆಯವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯ ಸಾಧಿಸಿ ಕಳ್ಳರು ಮನೆಯ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಬ್ರಹ್ಮಾವರ ತಾಲೂಕಿನ ಹೇರಾಡಿಯಲ್ಲಿ ನಡೆದಿದೆ.

​ಬಾರಕೂರು ನಿವಾಸಿ ಮಂಜುನಾಥ ರಾವ್ (77) ಎಂಬುವವರ ಮನೆಯಲ್ಲಿ ಈ ಕಳವು ಸಂಭವಿಸಿದೆ.
ಮಾರ್ಚ್ 6 ರಂದು ರಾತ್ರಿ 7:45 ರಿಂದ 10:15 ರ ಅವಧಿಯಲ್ಲಿ ಮಂಜುನಾಥ ರಾವ್ ಮತ್ತು ಅವರ ಪತ್ನಿ ಮನೆಯನ್ನು ಲಾಕ್ ಮಾಡಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದರು.

ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.
ಬೆಡ್‌ರೂಮ್‌ನಲ್ಲಿದ್ದ ಗೋಡ್ರೇಜ್ ಬೀಗವನ್ನು ಒಡೆದ ಕಳ್ಳರು ಅದರಲ್ಲಿದ್ದ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್ (47 ಗ್ರಾಂ), ಎರಡು ಚಿನ್ನದ ಮುತ್ತಿನ ಬಳೆಗಳು (32 ಗ್ರಾಂ), ಚಿನ್ನದ ಬೆಂಡೋಲೆ, ಉಂಗುರ ಹಾಗೂ ಬೆಳ್ಳಿಯ ಹರಿವಾಣ ಸೇರಿದಂತೆ ಒಟ್ಟು ಸುಮಾರು 14,18,000 ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಇದರೊಂದಿಗೆ ಮನೆಯಲ್ಲಿದ್ದ 49,000 ರೂಪಾಯಿ ನಗದು ಕೂಡ ಕಳುವಾಗಿದೆ. ಕಳವಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು 14,67,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 45/2026, ಕಲಂ: 331(4), 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.