ಡೈಲಿ ವಾರ್ತೆ: 26 ಜನವರಿ 2023

ಉಡುಪಿ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 74 ನೇ ಗಣರಾಜ್ಯೋತ್ಸವ:
ಸಂವಿಧಾನವು ಎಲ್ಲ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಧರ್ಮ ಗ್ರಂಥ – ಸ್ಟ್ಯಾನಿ ಲೋಬೋ

ಉಡುಪಿ:ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಭವಿಷ್ಯತ್ತಿನಲ್ಲಿ ಈ ದೇಶವನ್ನು ಕಟ್ಟುವ ರೂವಾರಿಗಳಾಗಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ನಮ್ಮ ಸಂವಿಧಾನದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಕಾನೂನುಗಳನ್ನು ಗೌರವಿಸುತ್ತಾ, ಭವ್ಯ ಭಾರತದ ದಿವ್ಯ ಪ್ರಜೆಗಳಾಗಿ ಬಾಳಿ ಬದುಕಬೇಕೆಂದು ಕರೆಯನ್ನು ನೀಡಿದರು.

ಉಡುಪಿಯ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 74 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಸ್ಟ್ಯಾನಿ ಲೋಬೋ ನೆರವೇರಿಸಿ ವಿದ್ಯಾರ್ಥಿಗಳೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಭಾರತ ದೇಶಕ್ಕೆ ಸುಭದ್ರ ಅಡಿಪಾಯವನ್ನು ಹಾಕಿ ಕೊಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭದ್ರಪಡಿಸುವಲ್ಲಿ ಸಂವಿಧಾನದ ಪಾತ್ರ ಅಮೂಲ್ಯವಾದದು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.