ಡೈಲಿ ವಾರ್ತೆ: 27 ಜನವರಿ 2023
ಶಾಸಕ ದಿನಕರ ಶೆಟ್ಟಿ ವಿರುದ್ಧವೇ ತಿರುಗಿ ಬಿದ್ದ ಸಂಘಪರಿವಾರದ ಕಾರ್ಯಕರ್ತರು
ಭಟ್ಕಳ: ಶಾಸಕ ದಿನಕರ ಶೆಟ್ಟಿ, ಬಿಜೆಪಿ ವಿರುದ್ಧವೇ ಸಂಘಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ವೀಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೊನ್ನಾವರದ ಶರಾವತಿ ಸರ್ಕಲ್ ನಲ್ಲಿ ಸೇರಿದ ಸಂಘಪರಿವಾರದ ಕಾರ್ಯಕರ್ತರು, ಬಿಜೆಪಿ, ಶಾಸಕ ದಿನಕರ್ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಗೂ ಪೂರ್ವ ನಡೆದ ಹೊನ್ನಾವರದ ಪರೇಶ್ ಮೇಸ್ತಾನ ಅಕಸ್ಮಿಕ ಸಾವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದ ದಿನಕರ್ ಶೆಟ್ಟಿ ಹಾಗೂ ಬಿಜೆಪಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಸಂಘಪರಿವಾರದ ಕಾರ್ಯಕರ್ತರು, ‘ನಿಮ್ಮನ್ನು ನಂಬಿ ನಾವು ಇದುವರೆಗೂ ಕೋರ್ಟ್ ಕಚೇರಿಗಳಿಗೆ ಅಲೆಯುತ್ತಿದ್ದೇವೆ. ಹಿಂದುತ್ವ ಎಂದು ನಮ್ಮನ್ನು ಹುರಿದುಂಬಿಸಿ ಕೊನೆಗೆ ನಮ್ಮನ್ನು ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳೂತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು, ಚೆನ್ನೈ ಮತ್ತಿತರ ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವ ನಾವು ಪ್ರತಿ ತಿಂಗಳು ಕೋರ್ಟ್ ಗೆ ಹಾಜರಾಗುತ್ತಿದ್ದೇವೆ. ನಮಗೆ ಸಂಬಧವಿಲ್ಲದ ಪ್ರಕರಣವೊಂದರಲ್ಲಿ ನಾವು ಇಷ್ಟೊಂದು ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಪ್ರತಿ ತಿಂಗಳು ಹೊನ್ನಾವರಕ್ಕೆ ಬಂದು ಹೋಗಲು ನಮಗೆ ಯಾರು ದುಡ್ಡುಕೊಡುತ್ತಾರೆ’ ಎಂದು ಸಂಘಪರಿವಾರದ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಮನೆಯಲ್ಲಿ ತಾಯಿಗೆ ಹುಷಾರಿಲ್ಲ. ತಮ್ಮನಿಗೆ ಪ್ರತಿ ವಾರಕ್ಕೆ ಔಷಧಿ ಬೇಕು. ದುಡಿದು ತಿನ್ನುವವ ನಮ್ಮಂಥವರಿಗೆ ಇದು ಸಾಧ್ಯವೇ? ಈ ದುಡ್ಡು ದಿನಕರ ಶೆಟ್ಟಿ ಕೊಡುತ್ತಾರಾ?? ಎಂದು ಮತ್ತೊಬ್ಬ ವ್ಯಕ್ತಿ ಪ್ರಶ್ನಿಸುತ್ತಿದ್ದಾರೆ.
‘ಹಿಂದುತ್ವ ಎಂದು ನಮ್ಮನ್ನು ಹುರಿದುಂಬಿಸಿ ಕೊನೆಗೆ ನಮ್ಮನ್ನು ಕೈಬಿಟ್ಟಿದ್ದಾರೆ. ಬಿಜೆಪಿ ಅಧಿಕಾರವನ್ನು ಅನುಭವಿಸಿ ನಮಗೆ ಏನು ಮಾಡಿದ್ದೀರಿ? ನಿಮಗೆ ಬೇಕಾದವರ ಕೇಸ್ ಗಳನ್ನು ವಜಾ ಮಾಡಿಸಿಕೊಂಡಿದ್ದೀರಿ, ಆದರೆ, ನಾವು ಮಾತ್ರ ಕೋರ್ಟ್ ಗೆ ಇಂದಿನವರೆಗೂ ಅಲೆದಾಡುತ್ತಿದ್ದೇವೆ. ಒಬ್ಬ ಬಿಜೆಪಿ ನಾಯಕರು ನಮ್ಮ ಸಮಸ್ಯೆಯನ್ನು ಆಲಿಸಲು ಬಂದಿದ್ದೀರಾ?’ ಎಂದು ಸಂಘಪರಿವಾರದ ಕಾರ್ಯಕರ್ತರು ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ 95 ಮಂದಿ ಮೇಲೆ ದೂರು ದಾಖಲಾಗಿತ್ತು. ಶಾಸಕ ದಿನಕರ ಶೆಟ್ಟಿ ಮೇಲೂ ಸಹ ದೂರು ದಾಖಲಾಗಿತ್ತು. ಆದರೆ, ನಮಗೆ ಓಡಾಡಲು ಸಮಸ್ಯೆಯಾಗುತ್ತಿದೆ. ನಿಮ್ಮನ್ನು ನಂಬಿ ಸಮಸ್ಯೆಗೆ ಸಿಲುಕಿದ್ದೇವೆ. ಕಾಂಗ್ರೆಸ್ ಪಕ್ಷವನ್ನೂ ಸಹ ವಿರೋಧ ಕಟ್ಟಿಕೊಂಡಿದ್ದೇವೆ. ಆದರೆ, ನಮ್ಮ ರಕ್ಷಣೆಗೆ ಮಾತ್ರ ಯಾರೂ ಬರುತ್ತಿಲ್ಲ’ ಎಂದು ಸಂಘಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.