ಡೈಲಿ ವಾರ್ತೆ:01 ಫೆಬ್ರವರಿ 2023

ಕುಂದಾಪುರ: ಕೋಡಿ ಮುಸ್ಲಿಂ ಕೇರಿ ಅಂಗನವಾಡಿ ಕೇಂದ್ರ ಲೋಕಾರ್ಪಣೆ

ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಕೋಡಿ ಮುಸ್ಲಿಂ ಕೇರಿ ಅಂಗನವಾಡಿ ಕೇಂದ್ರವು ಫೆ. 1 ರಂದು ಬುಧವಾರ ಲೋಕಾರ್ಪಣೆಗೊಂಡಿತು.

ಕೋಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ರಾದ ಇಸ್ಮಾಯಿಲ್ ಸಖಾಫೀ ಅವರ ದುವಾದೊಂದಿಗೆ ಕುಂದಾಪುರ ಪುರಸಭೆ 14 ನೇ ವಾರ್ಡಿನ ಸದಸ್ಯ ಅಷ್ಪಾಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅಷ್ಪಾಕ್ ಕೋಡಿರವರು 1998 ರಲ್ಲಿ ಸಮುದಾಯದ ಕಟ್ಟಡದಿಂದ ಪ್ರಾರಂಭವಾಗಿ ಇಂದು ಸ್ವಂತ ಕಟ್ಟಡದಲ್ಲಿ ನಿಂತಿರುವುದು ನಮ್ಮ ಭಾಗ್ಯ. ಹಲವು ವರ್ಷದಿಂದ ದುರಸ್ಥಿ ಕಾಣದೆ ಶಿಥಿಲವಾದ ಕಟ್ಟಡದ್ದಲ್ಲೇ ಪುಟಾಣಿಗಳು ಕುಳಿತುಕೊಳ್ಳಬೇಕಾಗಿತ್ತು.
ಇದನ್ನು ಮನಗೊಂಡು ಪುರಸಭೆ ಉತ್ತಮ ನಗರ ಅನುದಾನವನ್ನು ನಮ್ಮ ವಾರ್ಡಿಗೆ ತಂದು ಸಂಪೂರ್ಣ ಕಟ್ಟಡವನ್ನು ದುರಸ್ಥಿಗೊಳಿಸಿ ಅಂಗನವಾಡಿ ಕೇಂದ್ರದ ಸ್ವಂತ ಕಟ್ಟಡ ಕಟ್ಟಲಾಯಿತು. ಇದಕ್ಕೆ ನಮ್ಮ ವಾರ್ಡಿನ ಎಲ್ಲಾ ಮತದಾರರೇ ಕಾರಣ ಎಂದು ತಿಳಿಸಿದರು. ಅಲ್ಲದೆ ಈ ಕಟ್ಟಡವನ್ನು ಕಟ್ಟಲು ಸ್ಥಳವನ್ನು ಹಸ್ತಾಂತರಿಸಿದ ದಿ. ಕೆ. ಬಿ. ಮೊಹಮ್ಮದ್ ಹಾಜಿ ಅವರ ಮಕ್ಕಳಾದ ಇಲಿಯಾಸ್ ಹಾಗೂ ದುಲ್ಫಿಕಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶ್ವೇತ ಮಾತನಾಡಿ ಕೋಡಿ ಮುಸ್ಲಿಂ ಕೇರಿ ಅಂಗನವಾಡಿ ಕೇಂದ್ರವು ಶಿಶು ಅಭಿವೃದ್ಧಿ ಯೋಜನೆಯ ಒಂದು ಇತಿಹಾಸ ಪುಟದಲ್ಲಿ ಸೇರುವಂತ ದಿನವಾಗಿದೆ. ಬೇರೆ ಎಲ್ಲಾ ಅಂಗನವಾಡಿಗಳು ಸರಕಾರದ ವಿವಿಧ ಯೋಜನೆಗಳಲ್ಲಿ ನಾವು ಕಷ್ಟ ಪಟ್ಟು ಕಾಡಿ ಬೇಡಿ ಅನುದಾನ ತಂದು ಮಾಡುವಂತಾಗಿತ್ತು. ಆದರೆ ಈ ಮುಸ್ಲಿಂ ಕೇರಿ ಅಂಗನವಾಡಿ ಕೇಂದ್ರದ ಕಟ್ಟಡ ಆಗಬೇಕಾದರೆ ಈ ವಾರ್ಡಿನ ಪುರಸಭೆ ಸದಸ್ಯ ವಿದ್ಯಾಭಿಮಾನಿ ಅಷ್ಪಾಕ್ ಕೋಡಿ ಅವರ ಸತತ ಪ್ರಯತ್ನ
ಹಾಗೂ ಮುತುವರ್ಜಿಯಿಂದ ಹೊಸರೂಪ ಪಡೆಯಲು ಸಾಧ್ಯವಾಯಿತು. ಪುರಸಭೆಯ ನಗರ ಉತ್ತಮ ಅನುದಾನವನ್ನು ತಮ್ಮ ವಾರ್ಡಿಗೆ ತಂದು ನಿಮ್ಮೆಲ್ಲರಿಗೂ ಉಪಯೋಗವಾಗಲಿ, ನಮ್ಮ ಮಕ್ಕಳು ಕಲಿಯಲಿ, ಮುಂದಿನ ಪೀಳಿಗೆಗೆ ಉಪಯೋಗವಾಗಲಿ ಎನ್ನುವ ಮನೋಭಾವದಿಂದ ಮಾಡಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ವಾರ್ಡಿ ಸದಸ್ಯ ಅಷ್ಪಾಕ್ ಕೋಡಿ ವಹಿಸಿದ್ದರು.
ವಲಯ ಮೇಲ್ವಿಚಾರಕಿ ಶ್ರೀಮತಿ ಸುಜಯ ಸ್ವಾಗತಿಸಿದರು.

ಈ ಸಂದರ್ಭ ಸ್ಥಳದಾನಿಗಳಾದ ಇಲಿಯಾಸ್ ಹಾಗೂ ಅಬುಬಕರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಮಾತ್ ಅಧ್ಯಕ್ಷ ಜಿ. ಎಂ. ಮುಸ್ತಫಾಕ, ಮಹಮ್ಮದ್ ಆಲಿ, ಮುಲ್ಲಾ ಹುಸೇನಾರ್, ಹಾಜಿ ಸಾಹೇಬ್, ಯೂಸುಫ್ ಸಾಹೇಬ್, ಆಸೀಫ್ ಅಬೂಬಕ್ಕರ್ ಹಾಗೂ ಊರ ಮಹನೀಯರು, ಜಮತ್ ಬಾಂಧವರು ಮತ್ತು ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಹಾಗೂ ಸಹಾಯಕಿ ನಾಗಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿದ್ದಿಕ್ ಮಾಸ್ಟರ್ ನಿರೂಪಿಸಿ ವಂದಿಸಿದರು.