ಡೈಲಿ ವಾರ್ತೆ:03 ಫೆಬ್ರವರಿ 2023
ಬೆಂಗಳೂರು: ಟ್ರಾಫಿಕ್ ಜಾಮ್ ನಿಂದ ಆ್ಯಂಬುಲೆನ್ಸ್‌ನಲ್ಲಿದ್ದ ಒಂದೂವರೆ ವರ್ಷದ ಮಗು ಮೃತ್ಯು, ವ್ಯಾಪಕ ಆಕ್ರೋಶ!
ಬೆಂಗಳೂರು: ಮಿತಿಮೀರಿದ ಸಂಚಾರ ದಟ್ಟಣೆಗೆ ಒಂದೂವರೆ ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ನೆಲಮಂಗಲದ ಬಳಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ.
ಅಹಮದ್, ರುಕ್ಸಾನಾ ದಂಪತಿಯ ಪುತ್ರಿ ಹುದಾ ಕೌಸರ್, ನಿನ್ನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾ ಬಳಿ ಬುಲೆರೋ ವಾಹನ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದಳು.
ಈ ವೇಳೆ ತಂದೆ ಅಹಮದ್, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನ ಹಿಮ್ಸ್ಗೆ ರವಾನಿಸಲಾಗಿತ್ತು.
ಬಳಿಕ ಹಿಮ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಗುವನ್ನು ಬೆಂಗಳೂರಿಗೆ ರವಾನಿಸಲು ಆ್ಯಂಬುಲೆನ್ಸ್ ಮೂಲಕ ಹೋಗುವಾಗ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಟ್ರಾಫಿಕ್ ನಿಂದ ಆಸ್ಪತ್ರೆಗೆ ತೆರಳಲಾಗದೆ ಒಂದೂವರೆ ವರ್ಷದ ಹುದಾ ಮೃತಪಟ್ಟಿದ್ದಾಳೆ.
ವಿವಿಧ ಸಂಘಟನೆಗಳ ನೆರವಿನೊಂಗೆ ಜಿರೋ ಟ್ರಾಫಿಕ್ ಮೂಲಕ ನೆಲಮಂಗಲವರೆಗೂ ಆ್ಯಂಬುಲೆನ್ಸ್ ಬೇಗ ಬಂದಿತ್ತು. ಆ್ಯಂಬುಲೆನ್ಸ್ ಚಾಲಕ ಮಧು ಪರಿಶ್ರಮದಿಂದ ಕೇವಲ ಒಂದೂವರೆ ಗಂಟೆಗೆಲ್ಲಾ ನೆಲಮಂಗಲ ತಲುಪಿದ್ದರು. ಆದರೆ ನೆಲಮಂಗಲದಿಂದ ಟ್ರಾಫಿಕ್ ನಡುವೆ ಸಿಲುಕಿ ದಾರಿಮಧ್ಯೆಯೇ ಬಿಟ್ಟ ಕಂದಮ್ಮ ಪ್ರಾಣ ಬಿಟ್ಟಿದೆ. ಮಗುವನ್ನು ಕಳೆದುಕೊಂಡು ನಡುರಸ್ತೆಯಲ್ಲೇ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.