ಡೈಲಿ ವಾರ್ತೆ: 09 ಫೆಬ್ರವರಿ 2023

ಕೋಟ: ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾದ ಕಡಲೂರಿನ ಭಜಕರ ಜಾತ್ರೆ: ಭಗವತ್ ಭಜನೋತ್ಸವಕ್ಕೆ ಮುಸ್ಲಿಂ ಬಾಂಧವರಿಂದ ಶುಭಕೋರಿ ಬ್ಯಾನರ್ ಅಳವಡಿಕೆ

ಕೋಟ : ‘ಕಡಲೂರಿನಲ್ಲಿ ಭಜಕರ ಜಾತ್ರೆ’ ಎಂಬ ಟ್ಯಾಗ್ ಲೈನ್ ಹೊಂದಿ, ಭಗವತ್ ಭಜನೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಕೋಟ ಕಡಲತಡಿಯ ಪಡುಕರೆ ಎಂಬಲ್ಲಿ ಆಯೋಜಿಸಲಾಗಿದೆ.

ಕೋಟತಟ್ಟು ಪಡುಕರೆಯ ಶ್ರೀ ಭಗವತಿ ಭಜನಾ ಮಂದಿರದ ಸಾರಥ್ಯದಲ್ಲಿ ಉಡುಪಿ ಭಜನಾ ಮಂಡಳಿಗಳ ಒಕ್ಕೂಟ ಮತ್ತು ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಉಡುಪಿ ಇವರುಗಳ ಸಹಯೋಗದಲ್ಲಿ ಫೆ.12 ರಂದು ಆದಿತ್ಯವಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಭಜನಾ ಕಾರ್ಯಕ್ರಮಗಳು, ಭಜನಾ ಸ್ಪರ್ಧೆಗಳೂ ಹೆಚ್ಚಿನೆಲ್ಲೆಡೆಗಳಲ್ಲಿ ನಡೆಯುತ್ತಿರುತ್ತವೆ. ಅದರಲ್ಲೂ ಪಡುಕರೆಯ ಕಡಲತಡಿಯ ಈ ಭಜನೋತ್ಸವ ಒಂದು ವಿಶೇಷವಾಗಿದ್ದು ಅದೇ ಸರ್ವಧರ್ಮ ಸಮನ್ವಯವಾಗಿದೆ.

ಹಿಂದೂ ಸಂಘಟನೆಗಳು ಆಯೋಜಿಸಿರುವ ಈ ಉತ್ಸವದಲ್ಲಿ ಮುಸ್ಲಿಂ ಬಂಧುಗಳೂ ಶುಭಕೋರಿ ಬ್ಯಾನರ್ ಅಳವಡಿಸಿದ್ದು ಇಲ್ಲಿನ ವಿಶೇಷತೆ. ಕೋಟ, ಪಡುಕೆರೆ ಭಾಗ ಲಾಗಾಯಿತಿನಿಂದಲೂ ಧರ್ಮ ಸಮನ್ವಯ ಕಾಪಾಡಿಕೊಂಡು ಬಂದ ಪ್ರದೇಶ. ಇಲ್ಲಿನ ಎಲ್ಲಾ ವಿಶೇಷಗಳಲ್ಲೂ ಎಲ್ಲಾ ಧರ್ಮದವರೂ ಪಾಲ್ಗೊಳ್ಳುವುದು ಮೊದಲಿಂದಲೂ ನಡೆದುಕೊಂಡು ಬಂದಿದೆ. ಮುಸ್ಲಿಮರ, ಹಾಗೂ ಕ್ರೈಸ್ತರ ಹಬ್ಬಗಳಲ್ಲಿ ಹಿಂದೂ ಬಾಂಧವರು ಶುಭ ಹಾರೈಸುತ್ತಾರೆ. ಹಾಗೆಯೇ ದೇವಾಲಯಗಳ ಹಬ್ಬ ಹರಿದಿನಗಳಲ್ಲಿ ಇತರ ಧರ್ಮೀಯರೂ ಪಾಲ್ಗೊಳ್ಳುತ್ತಾರೆ. ಅಂತೆಯೇ ಈ ಭಜನೋತ್ಸವದಲ್ಲೂ ಸ್ಥಳೀಯ ಮುಸ್ಲಿಂ ಬಂಧುಗಳು ಶುಭ ಕೋರಿ ಬ್ಯಾನರ್ ಅಳವಡಿಸಿದ್ದಾರೆ.

ಇಲೆಕ್ಷನ್, ರಾಜಕೀಯವೆಂದು ಮತ ಧರ್ಮಗಳ ನಡುವೆ ಬೆಂಕಿ ಹೊತ್ತಿಸುವ ಈ ದಿನಗಳಲ್ಲಿ ಕೋಟ ಪಡುಕರೆಯ ಈ ಧರ್ಮ ಸಮನ್ವಯತೆ ಇತರೆಲ್ಲರಿಗೂ ಮಾದರಿಯಾಗಬಲ್ಲುದು.