ಡೈಲಿ ವಾರ್ತೆ:12 ಫೆಬ್ರವರಿ 2023

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು: ಬಿಎಸ್‌ ವೈ ಘೋಷಣೆ!

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ತೀರ್ಮಾನ ಮಾಡಿದ್ದೇವೆ. ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಕುವೆಂಪು ಆಗಿದ್ದಾರೆ. ಕುವೆಂಪು ಅವರು ವಿಶ್ವ ಮಾನವ ಸಂದೇಶವನ್ನ ಸಾರಿದ್ದಾರೆ. ಹಾಗಾಗಿ ಕುವೆಂಪು ಹೆಸರಿಸಲು ನಿರ್ಣಯ ಮಾಡಿದ್ದು, ಸದನದಲ್ಲಿ ನಾನೇ ಮಂಡಿಸುವೆ. ಅಧಿವೇಶನದಲ್ಲಿ ತೀರ್ಮಾನವನ್ನ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕ ಕಳುಹಿಸಲಾಗುತ್ತದೆ. ಬಿಎಸ್ ವೈ ಹೆಸರು ಮೊದಲೇ ಬೇಡ ಎಂದಿದ್ದೆ. ಹಾಗಾಗಿ ಕುವೆಂಪು ಹೆಸರು ಇಡಲು ನಿಶ್ಚಿಯಿಸಿರುವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೈಟ್ ಲ್ಯಾಂಡಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆ ಶಿವಮೊಗ್ಗ ಏರ್ಪೋರ್ಟ್ ಒಳಗೊಂಡಿದೆ. ಪ್ರಧಾನಿ ಮೋದಿಯವರು ಫೆಬ್ರವರಿ 27ರಂದು ಬರುವುದು ಖಚಿತವಾಗಿದ್ದು ಅವರೇ ಈ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ, ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಪ್ರಧಾನಿ ಮೋದಿ ಮತ್ತು ಶಾ ಪ್ರವಾಸ ಕೈಗೊಂಡಿದ್ದಾರೆ. 140 ಸ್ಥಾನ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವೆ. ನನಗೆ 80 ವರ್ಷ ತುಂಬುತ್ತಿದೆ. ಈ ಚುನಾವಣೆ ಮತ್ತು ಮುಂದಿನ ಚುನಾವಣೆಯಲ್ಲಿ ಸಕ್ರೀಯವಾಗಿ ಇರುತ್ತೇನೆ. ಎಲ್ಲೆ ಹೋದರು ಯಡಿಯೂರಪ್ಪ ಎಂಬ ಘೋಷಣೆಗಳು ಕೇಳಿ ಬರುತ್ತಿದೆ. ಹಾಗಾಗಿ ಇದೊಂದು ಸವಾಲು. ಸವಾಲು ಸ್ವೀಕರಿಸಿ ಜನರ ಬಳಿ ಹೋಗುತ್ತಿದ್ದೇನೆ. ಶ್ರಮ ವಹಿಸಿ ಪ್ರವಾಸ ಮಾಡಿ, ಮತ್ತೆ ಬಿಜೆಪಿಯನ್ನ ಸ್ಥಾನಕ್ಕೆ ತರಲಿದ್ದೇವೆ ಎಂದರು.

ನಿನ್ನೆ ಮಂಗಳೂರಿಗೆ ಅಮಿತ್ ಶಾ ಆಗಮಿಸಿದ್ದು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ನನಗೆ ಹೆಚ್ಚಿನ ಸಮಯ ನೀಡಿ ಹಳ್ಳಿಗೆ ಪ್ರವಾಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಅಧಿವೇಶನ ಮುಗಿದ ಮೇಲೆ ನನ್ನ ಪ್ರವಾಸ ಆರಂಭವಾಗಲಿದೆ. ಅಮಿತ್ ಶಾ ಗೆಲ್ಲುವ ಟಾರ್ಗೆಟ್ ನೀಡಿದ್ದಾರೆ. ಅದನ್ನು ನೆರವೇರಿಸಲಿದ್ದೇವೆ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.