ಡೈಲಿ ವಾರ್ತೆ:12 ಫೆಬ್ರವರಿ 2023

“ಓಂ , ಅಲ್ಲಾಹ್‌ ಎರಡೂ ಒಂದೇ’! ಸೈಯ್ಯದ್‌ ಅರ್ಷದ್‌ ಮದನಿ

ನವದೆಹಲಿ: “ಓಂ ಮತ್ತು ಅಲ್ಲಾಹ್‌ ಎರಡೂ ಒಂದೇ ಆಗಿದೆ. ಸುಮಾರು 1,400 ವರ್ಷಗಳಿಂದ ದೇಶದಲ್ಲಿ ಹಿಂದೂ ಮತ್ತು ಮಸ್ಲಿಮರು ಸೌಹಾರ್ದತೆಯಿಂದ ಜೀವನ ಮಾಡುತ್ತಿದ್ದಾರೆ,’ ಎಂದು ಜಮೀಯತ್‌ ಉಲೆಮಾ-ಇ-ಹಿಂದ್‌ ಅಧ್ಯಕ್ಷ ಸೈಯ್ಯದ್‌ ಅರ್ಷದ್‌ ಮದನಿ ಹೇಳಿದರು.

ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಜಮೀಯತ್‌ ಉಲೆಮಾ-ಇ-ಹಿಂದ್‌ ಸಮಾವೇಶದ 2ನೇ ದಿನವಾದ ಭಾನುವಾರ ಮಾತನಾಡಿದ ಅವರು, “ಈ ಮೊದಲು ಭೂಮಿ ಮೇಲೆ ಶ್ರೀರಾಮ, ಬ್ರಹ್ಮ ಅಥವಾ ಶಿವ ಯಾರೂ ಇಲ್ಲದೇ ಇದ್ದಾಗ ಮನು ಯಾರನ್ನು ಪೂಜಿಸುತ್ತಿದ್ದರು?,’ ಎಂದು ಅಲ್ಲಿ ನೆರೆದಿದ್ದ ಇತರೆ ಧರ್ಮ ಗುರುಗಳನ್ನು ಪಶ್ನಿಸಿದರು.

ಕೆಲವರು ನನಗೆ ಹೇಳಿದರು, ಆ ಸಮಯದಲ್ಲಿ ಮನು “ಓಂ’ ಅನ್ನು ಆರಾಧಿಸುತ್ತಿದ್ದರು ಎಂದು. ಈ “ಓಂ’ ಎನ್ನುವುದನ್ನೇ ನಾವು “ಅಲ್ಲಾಹ್‌’ ಎಂದು ಕೆರೆಯುತ್ತೇವೆ. ಪಾರ್ಸಿಗಳು “ಖುದಾ’ ಎನ್ನುತಾರೆ, ಆಂಗ್ಲರು “ಗಾಡ್‌’ ಎನ್ನುತ್ತಾರೆ,’ ಎಂದು ಪ್ರತಿಪಾದಿಸಿದರು.

“ಆರಂಭದಲ್ಲಿ “ಓಂ’ ಅಥವಾ “ಅಲ್ಲಾಹ್‌’ ಮಾತ್ರ ಇತ್ತು. ಇವೆರಡೂ ಒಂದೇ ಆಗಿದೆ. ಇದನ್ನೇ ಮನು ಆರಾಧಿಸುತ್ತಿದ್ದರು. ಶಿವ, ಬ್ರಹ್ಮ ಯಾರು ಇಲ್ಲದೇ ಇದ್ದಾಗ ನಾವು “ಓಂ’ ಮತ್ತು “ಅಲ್ಲಾಹ್‌’ ಎಂದೇ ಪೂಜಿಸುತ್ತಿದ್ದೆವು,’ ಎಂದು ವಿವಾದಿತ ಹೇಳಿಕೆ ನೀಡಿದರು.

ಹೊರನಡೆದ ಧರ್ಮಗುರುಗಳು
ಮದನಿ ಅವರ ಹೇಳಿಕೆಯಿಂದ ಅಸಮಾಧಾನಗೊಂಡ ಅನೇಕ ಇತರೆ ಧರ್ಮದ ಗುರುಗಳು ಸಮಾವೇಶದಿಂದ ಹೊರನಡೆದಿದ್ದಾರೆ. ವೇದಿಕೆಯಲ್ಲಿ ಉಪಸ್ಥಿತರಿದ್ದ ಜೈನ ಮುನಿ ಆಚಾರ್ಯ ಲೋಕೇಶ್‌ ಮುನಿ ಮಾತನಾಡಿ, “ಸಾಮರಸ್ಯದಿಂದ ಬದುಕುವ ವಿಚಾರವನ್ನು ನಾವೂ ಒಪ್ಪುತ್ತೇವೆ. ಆದರೆ, ಈ ಓಂ, ಅಲ್ಲಾಹ್‌, ಮನು ಕುರಿತ ಕಥೆಗಳನ್ನು ಒಪ್ಪಲ್ಲ. ಮದನಿ ಅವರು ಈ ಸಮಾವೇಶದ ವಾತಾವರಣವನ್ನೇ ಹಾಳು ಮಾಡಿದರು’ ಎಂದು ಹೇಳಿದ್ದಾರೆ.