ಡೈಲಿ ವಾರ್ತೆ:13 ಫೆಬ್ರವರಿ 2023
ಉಡುಪಿ: ಮಂಗಳಮುಖಿಯರಿಂದ ಹೋಟೆಲ್ ಆರಂಭ
ಉಡುಪಿ: ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಮೂವರು ತೃತೀಯ ಲಿಂಗಿಯರು ಹೊಟೇಲೊಂದನ್ನು ತೆರೆದಿದ್ದಾರೆ. ಈ ಮೂಲಕ ತೃತೀಯ ಲಿಂಗಿಗಳ ಮೇಲಿದ್ದ ಸಮಾಜದ ಕೆಟ್ಟ ಭಾವನೆ ಹೋಗಲಾಡಿಸಲು ಇದು ಸಹಾಯವಾಗಲಿದೆ. ಈ ಹೋಟೆಲ್ ಮಧ್ಯರಾತ್ರಿ 1 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ತೆರೆದಿರುತ್ತದೆ.
ರಾತ್ರಿ ಸಮಯದಲ್ಲಿ ಉಡುಪಿಯಲ್ಲಿ ಭಾಗಶಃ ಎಲ್ಲ ಹೋಟೆಲ್ಗಳು ಬಂದಾಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಪ್ರಯಾಣಿಸುವವರಿಗೆ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ಆಹಾರ ಸಿಗುವುದಿಲ್ಲ. ಹೀಗಾಗಿ ಮೂವರು ತೃತೀಯ ಲಿಂಗಿಗಳು ಪ್ರಾರಂಭಿಸಿದ ಈ ಹೋಟೆಲ್ ತುಂಬಾ ಅನುಕೂಲಕರವಾಗಿದ್ದು, ಸಾಕಷ್ಟು ಜನರು ಬಂದು ಸವಿಯುತ್ತಿದ್ದಾರೆ.
ಬೇರೆ ಬೇರೆ ಜಿಲ್ಲೆಯವರಾದ ಪೂರ್ವಿ, ವೈಷ್ಣವಿ ಮತ್ತು ಚಂದನಾ ಎಂಬ ಮೂವರು ತೃತೀಯ ಲಿಂಗಿಗಳ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿದ ಓರ್ವ ತೃತೀಯ ಲಿಂಗಿ, ಹೋಟೆಲ್ ಪ್ರಾರಂಭಿಸಿದಾಗಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಜನರು ಪ್ರಶಂಸೆ ಮತ್ತು ನಮ್ಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗೇ ಈ ವೃತ್ತಿ ನಮಗೆ ಸಂತೋಷದ ಬದುಕು ನೀಡಿದೆ ಎಂದು ಹೇಳಿದರು.
ಈ ಹೋಟೆಲ್ನ್ನು ಪ್ರಾರಂಭಿಸಲು ಧನ ಸಹಾಯ ಮಾಡಿದ ರಾಜ್ಯದಲ್ಲೇ ಎಂಬಿಎ ಪದವಿ ಪಡೆದ ಮೊದಲ ತೃತೀಯ ಲಿಂಗಿ ಸಮಿಕ್ಷಾ ಕುಂದರ್ ಮಾತನಾಡಿ, ಈ ಮೂವರು ತಮ್ಮ ಮನೆಯಲ್ಲೇ ಆಹಾರ ತಯಾರಿಸುತ್ತಾರೆ. ಇವರು ಸಣ್ಣದಾಗಿ ಪ್ರಾರಂಭಿಸಿದ ಉದ್ಯಮ ಎತ್ತರಕ್ಕೆ ಬೆಳೆಯಲಿ. ಮತ್ತು ಇವರ ಈ ಹೊಸ ಪ್ರಯತ್ನವನ್ನು ಜನರು ಸ್ವಾಗತಿಸಿದ್ದು ಸಂತಸ ತಂದಿದೆ. ಮತ್ತು ಅವರು ಸಕಾರಾತ್ಮಕವಾಗಿ ಕೆಲಸವನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯದಲ್ಲಿ ಅವರು ಯಶಸ್ಸು ಕಾಣಲಿ ಎಂದು ಸಮಿಕ್ಷಾ ಕುಂದರ್ ಹಾರೈಸಿದ್ದಾರೆ.