

ಡೈಲಿ ವಾರ್ತೆ: ಫೆ./14/2026
ಮಲ್ಪೆ| ಇಸ್ಪೀಟ್ ಜೂಜಾಟ ಅಡ್ಡೆಗೆ ಪೊಲೀಸ್ ದಾಳಿ: ₹4.90 ಲಕ್ಷ ನಗದು, ಫಾರ್ಚುನರ್ ಹಾಗೂ ಸ್ವಿಫ್ಟ್ ಕಾರು ವಶ, ಐವರ ಬಂಧನ

ಉಡುಪಿ: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದವರ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಿತಿನ್ ರಾಜ್ (35), ಸಚಿನ್ ಆರ್ ಶೆಟ್ಟಿ (35), ಸತೀಶ್ @ ಕಿಶೋರ್ (38), ರಂಜಿತ್ ಕೆ ಅಮೀನ್ (39) ಹಾಗೂ ರವಿ (36) ಎಂದು ಗುರುತಿಸಲಾಗಿದೆ.
ದಾಳಿ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳು, ರೂ. 4,90,920 ನಗದು, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ ಒಂದು ಪವರ್ ಬ್ಯಾಂಕ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಟೊಯೋಟಾ ಫಾರ್ಚುನರ್ ಕಾರು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 112 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87ರಂತೆ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.