ಡೈಲಿ ವಾರ್ತೆ: ಫೆ./13/2026

ಬಂಟ್ವಾಳ : ನೀರಿನ ಸಮಸ್ಯೆ, ಪುರಸಭಾ ಕಛೇರಿಗೆ ಬೀಗ ಜಡಿದ ನಾಗರಿಕರು

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಲ್ಲಿನ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದ ಸಾರ್ವಜನಿಕರು ಪುರಸಭಾ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ನಡೆದಿದೆ.

ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಕಳೆದ ಕೆಲವು ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು ಜನರು ನೀರಿಗಾಗಿ ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದ್ದರಾದರೂ ಯಾವುದೇ ರೀತಿಯ ಸ್ಪಂದನೆ ದೊರಕಿದೆ ಹಿನ್ನೆಲೆಯಲ್ಲಿ ಶುಕ್ರವಾರ ಕಛೇರಿಗೆ ಬೀಗ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಸಾರ್ವಜನಿಕರು ನೀರಿನ ವ್ಯವಸ್ಥೆ ಮಾಡದೇ ಇಲ್ಲಿಂದ ಕದಲುವುದಿಲ್ಲ ಎಂದು  ಪಟ್ಟು ಹಿಡಿದು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ನೂತನವಾಗಿ ನೇಮಕಗೊಂಡ ತೀರ್ಥಪ್ರಸಾದ್ ಅವರು ಪುರಸಭೆಯಲ್ಲಿ ಕಾನೂನು ಬಾಹಿರವಾಗಿ ನೇಮಕ ಮಾಡಲಾದ ಸಿಬ್ಬಂದಿಗಳ ವೇತನ ತಡೆಹಿಡಿದಿದ್ದರು. ಇದರ ವಿರುದ್ಧ ಪುರಸಭೆಯ ಹೊರ ಗುತ್ತಿಗೆ ಹಾಗೂ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದ್ದು, ಮೇಲಾಧಿಕಾರಿಗಳು ಮದ್ಯ ಪ್ರವೇಶಿಸಿ ಬಾಕಿ ವೇತನದ
ಪಾವತಿಗೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ತೆರವುಗೊಳಿಸಲಾಗಿತ್ತು.

ಉಪ ಜಿಲ್ಲಾಧಿಕಾರಿ ಮೀನಾಕ್ಷಿ ಆರ್ಯ, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರೊಜೆಕ್ಟ್ ಡೈರೆಕ್ಟರ್ ಸಂತೋಷ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ,
ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮತ್ತು ಇಂಜಿನಿಯರ್ ಡಿಮೆಲ್ಲೋ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿದರು.

ಈ ವೇಳೆ ನೂತನ ಮುಖ್ಯಾಧಿಕಾರಿ ಅವರೊಂದಿಗೆ ಇಂಜಿನಿಯರ್ ಡಿಮೆಲ್ಲೋ ಅವರಿಗೆ ಇರುವ ಮುನಿಸು ಕೂಡಾ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು ನಾವು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.