

ಡೈಲಿ ವಾರ್ತೆ: ಫೆ./14/2026
ಉಡುಪಿ| NSUI ಜಿಲ್ಲಾ ನಾಯಕನ ಮೇಲೆ ತಲವಾರು ದಾಳಿ ಪ್ರಕರಣ: ಐವರು ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಎನ್‌ಎಸ್‌ಯುಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ನಡೆದ ಮಾರಕಾಸ್ತ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38) ಹಾಗೂ ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಜನವರಿ 30ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್ (25) ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಅಕ್ಷತ್ ಪೈ, ಶಂಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲಕರ ಮಗನೊಂದಿಗೆ ಸಣ್ಣ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ಉಂಟಾಗಿತ್ತು.
ನಂತರ ಶರತ್ ಕುಂದರ್ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಲ್ಸಂಕ ಬಳಿ ತಲುಪುವ ಸಂದರ್ಭದಲ್ಲಿ ಅಕ್ಷತ್ ಪೈ ಕರೆ ಮಾಡಿ, ಹೋಟೆಲ್‌ನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ. ರಾತ್ರಿ ಸುಮಾರು 11.30ರ ಸುಮಾರಿಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ಶರತ್ ಕುಂದರ್ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳು ಏಕಾಏಕಿ ಬಂದು ನಿಂತಿವೆ.
ವಾಹನಗಳಿಂದ ಇಳಿದ ಆರೋಪಿಗಳು ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿ, ಬಳಿಕ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಶರತ್ ಕುಂದರ್ ಅವರನ್ನು ಖಾಸಗಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಕರಣ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 191(2), 191(3), 118(2), 109, 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಡೈ ಅವೆನ್ಯೂ ಕಾರು (ಅಂದಾಜು ಮೌಲ್ಯ ₹8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಾಜಕೀಯ ಹಿನ್ನೆಲೆಯ ದಾಳಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿವೆ.