ಡೈಲಿ ವಾರ್ತೆ: ಫೆ./14/2026

ಆಟವಾಡುತ್ತಿದ್ದ ವೇಳೆ ಆಕಸ್ಮಿಕ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

ಬೀದರ್: ಜಿಲ್ಲೆಯ ಬೀದರ್ ತಾಲೂಕಿನ ಮಲ್ಲಿಕ್‌ಮರ್ಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಚರಂಡಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ.

ಅವಿನಾಶ್ (5) ಮೃತ ಬಾಲಕನಾಗಿದ್ದು, ಶುಕ್ರವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಸಂಜೆಯಿಂದ ಬಾಲಕ ಕಾಣೆಯಾಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರು. ಆದರೆ ಯಾವುದೇ ಸುಳಿವು ಸಿಗದೆ ಆತಂಕ ಹೆಚ್ಚಾಗಿತ್ತು. ನಂತರ ಮನೆಯ ಸಮೀಪದ ಚರಂಡಿಯಲ್ಲಿ ಮಗು ಬಿದ್ದಿರುವುದು ಪತ್ತೆಯಾಗಿದ್ದು, ಅದಾಗಲೇ ಬಾಲಕ ಮೃತಪಟ್ಟಿದ್ದಾನೆ.

ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕ ವಾತಾವರಣ ಆವರಿಸಿದೆ.

ಈ ಘಟನೆ ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.