

ಡೈಲಿ ವಾರ್ತೆ: ಫೆ./14/2026
ಹುಣಸೂರಿನ ಬಿಳಿಕೆರೆಯಲ್ಲಿ ಪೆಟ್ರೋಲ್ ಬಂಕ್ ಮೇಲೆ ಮಾರಕಾಸ್ತ್ರದ ದಾಳಿ – ಸಿಬ್ಬಂದಿ ಮೇಲೆ ಹಲ್ಲೆ, ನಗದು ಕಸಿದು ಪರಾರಿ

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿರುವ ಸ್ವಾಮಿ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್‌ನಲ್ಲಿ ಮಾರಕಾಸ್ತ್ರ ಹಿಡಿದ ಐವರ ಗ್ಯಾಂಗ್ ದರೋಡೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಫೆಬ್ರವರಿ 12ರಂದು ರಾತ್ರಿ ಸುಮಾರು 10:30ರ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಆರೋಪಿಗಳು ಮೊದಲು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ನಂತರ ತಕ್ಷಣವೇ ಕಚೇರಿ ಒಳಗೆ ನುಗ್ಗಿ ಅಲ್ಲಿದ್ದ ಇಬ್ಬರು ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸುಮಾರು ₹15,300 ನಗದು ಕಸಿದು ಪರಾರಿಯಾಗಿದ್ದಾರೆ.
ದರೋಡೆ ಮತ್ತು ಹಲ್ಲೆಯ ಸಂಪೂರ್ಣ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಚಲನವಲನಗಳು ಸ್ಪಷ್ಟವಾಗಿ ದಾಖಲಾಗಿವೆ.
ಘಟನೆ ಬಳಿಕ ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಪ್ರಕರಣ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರೆದಿದೆ.
ಈ ಘಟನೆಯಿಂದಾಗಿ ಬಿಳಿಕೆರೆ ಪ್ರದೇಶದಲ್ಲಿ ಭದ್ರತೆ ಕುರಿತು ಚರ್ಚೆಗಳು ಜೋರಾಗಿದ್ದು, ರಾತ್ರಿ ಪೆಟ್ರೋಲ್ ಬಂಕ್‌ಗಳಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸುವ ಅವಶ್ಯಕತೆ ಎದುರಾಗಿದೆ.