ಡೈಲಿ ವಾರ್ತೆ:14 ಫೆಬ್ರವರಿ 2023
ವಿಚ್ಛೇದನ ನೀಡುವಂತೆ ಪತಿ ನೋಟಿಸ್ ನೀಡಿದಕ್ಕೆ ಪತ್ನಿ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣು!
ಕೆ.ಆರ್.ಪುರ: ವಿಚ್ಛೇದನ ನೀಡುವಂತೆ ಪತಿ ನೋಟಿಸ್ ನೀಡಿದಕ್ಕೆ ಪತ್ನಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಸಮೀಪದ ಸಾಯಿ ಬಡಾವಣೆಯಲ್ಲಿ ನಡೆದಿದೆ.
ಸೀಗೆಹಳ್ಳಿ ನಿವಾಸಿ ರಾಣಿ (27) ನೇಣಿಗೆ ಶರಣಾದ ಮಹಿಳೆ. ಕಳೆದ 8 ತಿಂಗಳ ಹಿಂದೆ ಮುಳಬಾಗಿಲು ತಾಲೂಕಿನ ದೊಡ್ಡಮುದ್ದೇನಹಳ್ಳಿ ಗ್ರಾಮದ ಸಾಫ್ಟವೇರ್ ಉದ್ಯೋಗಿ ಆಗಿದ್ದ ಜೀವನ್ ಕುಮಾರ್ ಎಂಬಾತನ ಜತೆ ರಾಣಿ ವಿವಾಹವಾಗಿದ್ದರು. ಮದುವೆಯಾದ ನಂತರ ಜೀವನಕುಮಾರ್ ತನ್ನ ಪತ್ನಿ ರಾಣಿಯನ್ನು ಮುಳಬಾಗಿಲು ತಾಲೂಕಿನ ದೊಡ್ಡಮುದ್ದೇನಹಳ್ಳಿಯಲ್ಲಿ ತಮ್ಮ ಕುಟುಂಬದ ಜೊತೆ ಬಿಟ್ಟು ನಗರದ ಜಯನಗರದಲ್ಲಿ ಉದ್ಯೋಗದ ನಿಮಿತ್ತ ಜಯನಗರದಲ್ಲಿ ವಾಸವಾಗಿದ್ದ 3 ತಿಂಗಳ ನಂತರ, ಗಂಡನ ಮನೆಯವರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಗಂಡನ ಜೊತೆ ಜಯನಗರದಲ್ಲಿ ವಾಸವಾಗಿದ್ದರು. ಕೆಲ ತಿಂಗಳಿನಿಂದ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತ್ತು.
ಈ ಮಧ್ಯೆ, ತನ್ನ ಪತಿ ನಿತ್ಯ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಮೊರೆ ಹೋಗಿದ್ದರು, ಪೊಲೀಸರು ದಂಪತಿಯನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಆದರೂ ಇಬ್ಬರ ನಡುವೆ ಸುಧಾರಣೆ ಕಾಣದ ಹಿನ್ನಲೆ ಜೀವನ್ ಕುಮಾರ್ 15 ದಿನದ ಹಿಂದೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಇದನ್ನೇ ನೆಪಮಾಡಿಕೊಂಡು ಪತ್ನಿ ರಾಣಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ವಿಚ್ಛೇದನ ನೀಡುವಂತೆ ನೋಟಿಸ್ ನೀಡಿದ್ದಾನೆ. ಇದರಿಂದ ಮನನೊಂದ ರಾಣಿ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ತನ್ನ ಕೊಠಡಿಯಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಐವರ ವಿರುದ್ಧ ಎಫ್ಐಆರ್: ವರದಕ್ಷಿಣೆ ಕೊಡುವಂತೆ ನನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಆರೋಪಿಸಿ ರಾಣಿ ಪತಿ ಜೀವನಕುಮಾರ್ ಸೇರಿದಂತೆ ಐವರು ವಿರುದ್ಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಮೃತ ರಾಣಿಯ ಪೋಷಕರು ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಐವರು ವಿರುದ್ಧ ದಾಖಲಿಸಿಕೊಂಡಿರುವ ಕೆಆರ್ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೀವನ್‌ನ ತಂದೆ ಆವಣಿ ಗ್ರಾಪಂ ಪಿಡಿಒ ವರದರಾಜ ಸೇರಿ ಅತ್ತೆ ನಿರ್ಮಲಾ ಹಾಗೂ ಗಂಡನ ಸಹೋದರಾದ ವಿವೇಕ್ ಕುಮಾರ್, ಮಧುಸೂದನ್ ಮೇಲೆ ಪೋಷಕರು ದೂರು ನೀಡಿದ್ದಾರೆ. ದೂರಿನ ಆಧಾರದ ಐವರು ಮೇಲೆ ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ : ಮದುವೆಯಾದ ಬಳಿಕ ದಿನಗಳು ಕಳೆಯುತ್ತಿದ್ದಂತೆ ವರದಕ್ಷಿಣೆಗೆ ತರುವಂತೆ ತನ್ನ ಗಂಡ, ಅತ್ತೆ, ಮಾವ, ಮೈದುನನಂದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಶರಣಾಗಿದ್ದೇನೆ ಎಂದು ಪತ್ನಿ ರಾಣಿ ಡೆತ್‌ನೋಟ್ ಬರೆದಿದ್ದು, ಗಂಡ ಜೀವನ್ ಕುಮಾರ್ ಸೇರಿ ಐವರ ಹೆಸರು ಉಲ್ಲೇಖೀಸಿದ್ದಾರೆ.