ಡೈಲಿ ವಾರ್ತೆ:14 ಫೆಬ್ರವರಿ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಹೆಗ್ಗರಣಿಯಲ್ಲಿ ಆಕಸ್ಮಿಕ ಬೆಂಕಿತಗಲಿ ಎರಡು ಹುಲ್ಲು ಮನೆ ಭಸ್ಮ, ಲಕ್ಷಾಂತರ ರೂ. ನಷ್ಟ.!

ಅಂಕೋಲಾ : ಆಕಸ್ಮಿಕ ಬೆಂಕಿ ಅವಘಡದಿಂದ ಎರಡು ಹುಲ್ಲು ಮನೆ ಸಂಪೂರ್ಣ ನಾಶವಾಗಿದ್ದು, ಅಡಿಕೆ, ಭತ್ತ, ನಗ-ನಾಣ್ಯ, ಆಹಾರ ದಿನಸಿ ಮತ್ತು ಮನೆ ಕಟ್ಟು ಸಾಮಗ್ರಿ ಸೇರಿದಂತೆ ಲಕ್ಷಾಂತರ ರೂ. ಹಾನಿಯಾದ ಘಟನೆ ತಾಲೂಕಿನ ಡೋಂಗ್ರಿ ಗ್ರಾಪಂ.ವ್ಯಾಪ್ತಿಯ ಹೆಗ್ಗರಣಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ

ಹೆಗ್ಗರಣಿಯ ಮಾದೇವ ನಾಗಪ್ಪ ಗೌಡ, ವೆಂಕಟ್ರಮಣ ನಾಗಪ್ಪ ಗೌಡ ಇವರಿಬ್ಬರು ಮನೆಯು ಅಗ್ನಿ ಅವಘಡಕ್ಕೆ ಹಾನಿಯಾಗಿದೆ. ಮೊದಲಿಗೆ ಮಾದೇವ ಗೌಡನ ಮನೆಗೆ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ವೆಂಕಟರಮಣ ಗೌಡ ಮನೆ ಬೆಂಕಿ ಪಸರಿಸಿದ ಪರಿಣಾಮವಾಗಿ ಬೆಂಕಿಯ ಕೆನ್ನಾಲೆಗಿಗೆ ಸಿಲುಕಿ ಮಾದೇವ ಗೌಡ 4.35ಲಕ್ಷ ರೂ., ವೆಂಕಟ್ರಮಣ ಗೌಡ 6.10 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾ ಜಿಸಲಾಗಿದೆ.
ತಹಸೀಲ್ದಾರ್ ಸತೀಶ ಟಿ. ಗೌಡ ಅವರ ಮಾರ್ಗದರ್ಶನದಲ್ಲಿ ಗ್ರಾಮ ಲೆಕ್ಕಿಗ ಲಕ್ಷ್ಮೀದೇವಿ, ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ, ಹಾನಿಯ ವರದಿಯನ್ನು ತಹಸೀಲ್ದಾರ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಡೋಂಗ್ರಿ ಗ್ರಾಪಂ.ಅಧ್ಯಕ್ಷೆ ಲತಾ ಲೋಕೇಶ್ವರ ನಾಯ್ಕ, ಸದಸ್ಯ ಮಂಜುನಾಥ ಸಿದ್ದಿ, ಪಿಡಿಓ ಗಿರೀಶ ತಳ ವಾರ, ಗ್ರಾಮ ಸಹಾಯಕ ಶಂಕರ ನಾಯ್ಕ, ಪೊಲೀಸ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಆಕಸ್ಮಿಕ ಬೆಂಕಿ ಅವಘಡದಿಂದ ಎರಡು ಹುಲ್ಲು ಮನೆ ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. ಗ್ರಾಮ ಲೆಕ್ಕಿಗ ಅವರು ನೀಡಿದ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ರವಾನಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದಿಲ್ಲಾ ಎಂದು ತಹಸೀಲ್ದಾರ್ ಸತೀಶ ಗೌಡ ತಿಳಿಸಿದ್ದಾರೆ.