ಡೈಲಿ ವಾರ್ತೆ: ಮಾ./10/2026

ಕಾಪುವಿನಲ್ಲಿ ವೃದ್ದ ಮಹಿಳೆ ಹತ್ಯೆ: ಮದ್ಯಪಾನದ ವೇಳೆ ಜಗಳ, ಇಬ್ಬರು ಪೊಲೀಸರ ವಶಕ್ಕೆ

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಹಿಳೆಯೊಬ್ಬರನ್ನು ಹರಿತವಾದ ಆಯುಧದಿಂದ ಕಡಿದು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದ ಮಹಿಳೆಯನ್ನು ವನಜಾ ಪೂಜಾರ್ತಿ (60) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬ ಇಬ್ಬರನ್ನು ಕಾಪು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಮಾಹಿತಿಯ ಪ್ರಕಾರ, ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಮಾರ್ಚ್ 9ರಂದು ಸಂಜೆ 5 ಗಂಟೆಯಿಂದ ಮಾರ್ಚ್ 10ರಂದು ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ, ಅದರ ಹಿನ್ನೆಲೆದಲ್ಲಿ ಇಬ್ಬರು ಆರೋಪಿಗಳು ಹರಿತವಾದ ಆಯುಧದಿಂದ ವನಜಾ ಪೂಜಾರ್ತಿಯನ್ನು ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103ರಡಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಕೆಎಂಸಿ ಮಣಿಪಾಲದ ಫೊರೆನ್ಸಿಕ್ ವೈದ್ಯರು, ಸೀನ್ ಆಫ್ ಕ್ರೈಂ ಆಫೀಸರ್ (SOCO) ತಂಡ, ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.