ಡೈಲಿ ವಾರ್ತೆ: ಮಾ./10/2026

ಕಾಪು| ಬೈಕ್, ಸ್ಕೂಟಿ ನಡುವೆ ಭೀಕರ ಅಪಘಾತ – ಯುವಕ ಸಾವು, ಇಬ್ಬರಿಗೆ ಗಾಯ

ಕಾಪು: ಬೈಕ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಕಾಪುವಿನಲ್ಲಿ ನಡೆದಿದೆ.

ಮೃತಪಟ್ಟವರು ಅದಮಾರು ಕಾಲೇಜು ಬಳಿಯ ನಿವಾಸಿ ಸೂರಜ್ (23) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬೈಕ್‌ನ ಸಹಸವಾರ ಅಧೀಶ್ ಹಾಗೂ ಸ್ಕೂಟಿ ಸವಾರ ಕೊಪ್ಪಲಂಗಡಿ ನಿವಾಸಿ ಉಮೇಶ್ ಗಾಯಗೊಂಡಿದ್ದಾರೆ.

ಸೂರಜ್ ಅವರು ಪಡುಬಿದ್ರಿಯ ಸುಜ್ಞಾನ್ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ರಾತ್ರಿ ವೇಳೆ ಕಟಪಾಡಿಯಿಂದ ತನ್ನ ಅದಮಾರು ನಿವಾಸಕ್ಕೆ ಮರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೆ–1 ಹೋಟೆಲ್ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಸೂರಜ್ ಹಾಗೂ ಸ್ಕೂಟಿ ಸವಾರ ಉಮೇಶ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸಹಸವಾರ ಅಧೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಗಾಯಾಳುಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಗಂಭೀರವಾಗಿ ಗಾಯಗೊಂಡ ಸೂರಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಅವರನ್ನು ವಾಪಸ್ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.