

ಡೈಲಿ ವಾರ್ತೆ: ಮಾ./10/2026

ಯುದ್ಧಪೀಡಿತ ರಾಷ್ಟ್ರಗಳಲ್ಲಿನ ಕನ್ನಡಿಗರ ರಕ್ಷಣೆ: ವಿದೇಶಾಂಗ ಸಚಿವ ಜೈಶಂಕರ್ ಭೇಟಿಯಾದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರು ಹಾಗೂ ಭಾರತೀಯರ ರಕ್ಷಣೆಗೆ ಸಂಬಂಧಿಸಿದಂತೆ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಡಾ. ಮಂಜುನಾಥ್ ಅವರು ನವದೆಹಲಿಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಬೆಹರೈನ್, ಕತಾರ್, ದುಬೈ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಕಳವಳ ಮತ್ತು ಮನವಿಯನ್ನು ಸಚಿವರ ಗಮನಕ್ಕೆ ತಂದ ಸಂಸದರು, ಸಂಕಷ್ಟದಲ್ಲಿರುವ ಭಾರತೀಯರನ್ನ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಂತೆ ಒತ್ತಾಯಿಸಿದರು.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿದೇಶಾಂಗ ಸಚಿವ ಜೈಶಂಕರ್, “ಕೇಂದ್ರ ಸರ್ಕಾರವು ಅನಿವಾಸಿ ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಯುದ್ಧಪೀಡಿತ ಪ್ರದೇಶದ ವಿಮಾನ ನಿಲ್ದಾಣಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದನ್ನು ಸರ್ಕಾರ ಗಮನಿಸುತ್ತಿದೆ. ಈ ಸವಾಲಿನ ನಡುವೆಯೂ ಭಾರತೀಯರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ,” ಎಂದು ಭರವಸೆ ನೀಡಿದ್ದಾರೆ.
ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು, “ಸಚಿವ ಜೈಶಂಕರ್ ಅವರಂತಹ ಪ್ರತಿಭಾವಂತ ಮತ್ತು ಅನುಭವೀ ಸಚಿವರು ನಮ್ಮವರ ರಕ್ಷಣೆಗೆ ಶ್ರಮಿಸುತ್ತಿರುವುದು ನಮಗೆ ವಿಶ್ವಾಸ ಮೂಡಿಸಿದೆ. ಯಾವುದೇ ಹಂತದಲ್ಲೂ ಸಮಸ್ತ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರ ಕುಟುಂಬಸ್ಥರು ಧೈರ್ಯದಿಂದಿರಬೇಕು,” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಡಾ. ಮಂಜುನಾಥ್ ಉಪಸ್ಥಿತರಿದ್ದು, ಅನಿವಾಸಿ ಕನ್ನಡಿಗರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.